ಹುಬ್ಬಳ್ಳಿ:ನಗರವನ್ನು ಸ್ಮಾರ್ಟ್ ಮಾಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ 'ಸ್ಮಾರ್ಟ್ ಸಿಟಿ ಯೋಜನೆ' ಜಾರಿಗೆ ತಂದಿದೆ. ಆದರೆ ಈ ಯೋಜನೆಯಿಂದ ವಾಣಿಜ್ಯ ನಗರಿ ಸ್ಮಾರ್ಟ್ ಆಗುವ ಬದಲಿಗೆ ಧೂಳುಮಯವಾಗಿ ಬದಲಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆ ರಸ್ತೆಗಳ ನಿಜ ಸ್ವರೂಪ ಬಯಲಾಗುತ್ತಿದೆ. ರಸ್ತೆಗಿಳಿದರೆ ಧೂಳೇ ಧೂಳು. ಸ್ಮಾರ್ಟ್‌ಸಿಟಿ ಯೋಜನೆ ಅವಧಿಯೂ ಮುಗಿಯುತ್ತಾ ಬಂದರೂ ನಗರದಲ್ಲಿ ಮಾತ್ರ ರಸ್ತೆಗಳ ವ್ಯವಸ್ಥೆ ಸುಧಾರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಮಳೆ ಬಂದರೆ ಕೆಸರು ಗದ್ದೆಯಾಗಿ, ಬಿಸಿಲಾದರೆ ಧೂಳಿನಿಂದ ಕೂಡುವ ನಗರದ ರಸ್ತೆಗಳು ಜನರನ್ನು ಅನಾರೋಗ್ಯದ ಕೂಪಕ್ಕೆ ತಳ್ಳುತ್ತಿವೆ. ಪ್ರಮುಖ ರಸ್ತೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ರಸ್ತೆಗಳು ಬಹುತೇಕ ಧೂಳಿನಿಂದ ಕೂಡಿವೆ. ನಗರದಲ್ಲಿ 2,100 ಚದರ ಕಿ.ಮೀಟರ್ ರಸ್ತೆ ಇದೆ. ಇದರಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಒಂದಿಷ್ಟು ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಉಳಿದ ರಸ್ತೆಗಳನ್ನು ವಿವಿಧ ಕಾಮಗಾರಿಗಳಿಗೆ ಅಗೆದು ಹಾಗೆಯೇ ಬಿಡಲಾಗಿದೆ. ಆ ರಸ್ತೆಯಲ್ಲಿ ವಾಹನಗಳು ಸಂಚರಿಸುವುದರಿಂದ ಧೂಳು ಗಾಳಿಯಲ್ಲಿ ಬೆರತು ಜನರ ದೇಹ ಸೇರುತ್ತಿದೆ.
ಸಾರ್ವಜನಿಕರ ಆತಂಕ:ಈಗಾಗಲೇ ವಾಣಿಜ್ಯ ನಗರಿ ಹುಬ್ಬಳ್ಳಿಯ ಪರಿಸ್ಥಿತಿ ನೋಡಿದರೆ, ಕೊರೊನಾ, ಒಮಿಕ್ರಾನ್ಗಾಗಿ ಜನರು ಮಾಸ್ಕ್ ಹಾಕುವುದಕ್ಕಿಂತ ಹೆಚ್ಚಾಗಿ ಧೂಳಿನಿಂದ ಆರೋಗ್ಯ ಕಾಪಾಡಿಕೊಳ್ಳಲು ಪರದಾಡುವಂತಾಗಿದೆ. ಹಳೆ ಹುಬ್ಬಳ್ಳಿ, ನೇಕಾರ ನಗರ, ಆನಂದ ನಗರ, ಕಾರವಾರ ರಸ್ತೆ ಸೇರಿ ಅನೇಕ ರಸ್ತೆಗಳು ಸಂಚರಿಸುವ ಜನರು ಧೂಳಿನ ಭಯದಿಂದ ಮಾಸ್ಕ್ ಧರಿಸುವುದನ್ನು ರೂಢಿಸಿಕೊಂಡಿದ್ದಾರೆ. ಧೂಳಿನಿಂದ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ಹೋದರೆ, ಹಲವಾರು ರೋಗದ ಭಯ ಹುಟ್ಟುತ್ತದೆ ಎಂಬುವುದು ಸಾರ್ವಜನಿಕರ ಆತಂಕದ ಮಾತು.