ಹುಬ್ಬಳ್ಳಿ: ಅದು ದೇಶದ ಮೊದಲ ವಿಮಾ ಸೌಲಭ್ಯಕ್ಕೆ ಒಳಪಟ್ಟ ರಸ್ತೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಕೂಡ ಹೆಸರನ್ನು ಅಚ್ಚೊತ್ತುವ ಮೂಲಕ ರಾಷ್ಟ್ರ ಹಾಗೂ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದ್ದ ರಸ್ತೆ. ಆದರೆ, ಆ ರಸ್ತೆಯೀಗ ಅವ್ಯವಸ್ಥೆಯ ಆಗರವಾಗಿದೆ.
ಹುಬ್ಬಳ್ಳಿ ವಿದ್ಯಾನಗರದ ತಿಮ್ಮಸಾಗರ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ವಾಣಿಜ್ಯ ನಗರಿಯ ನೂತನ ನ್ಯಾಯಾಲಯದ ಸಂಕೀರ್ಣದ ಮುಂಭಾಗದಲ್ಲಿರುವ ತಿಮ್ಮಸಾಗರ ರಸ್ತೆ ಅಪಘಾತಗಳಿಗೆ ಆಹ್ವಾನ ನೀಡುವಂತಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ. ವಾಹನ ಸವಾರರು ಭಯದಲ್ಲಿಯೇ ವಾಹನ ಚಾಲನೆ ಮಾಡಬೇಕಿದೆ. ಹೀಗಿದ್ದರೂ ಈ ರಸ್ತೆಗೆ ಮಾತ್ರ ಕಾಯಕಲ್ಪ ಸಿಕ್ಕಿಲ್ಲ. ಈ ಹಿಂದೆ ಈ ರಸ್ತೆಗೆ ಸ್ಥಳೀಯ ನಿವಾಸಿಗಳು ವಿಮಾ ಸೌಲಭ್ಯವನ್ನು ಕಲ್ಪಿಸಿದ್ದರೂ ಇದುವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ.