ಸುದ್ದಿಗಾರರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು. ಧಾರವಾಡ: ಜನರಿಗೆ ಯಾವುದೇ ಯೋಜನೆ ಪರಿಹಾರ ಕೊಡಲು ನಮ್ಮ ವಿರೋಧ ಇಲ್ಲ. ಆದರೆ ಮತಕ್ಕಾಗಿ ಪ್ಲಾನಿಂಗ್ ಇಲ್ಲದೆ ಮಾಡಿದ್ದು ಎಷ್ಟು ಸರಿ? ಕಷ್ಟದಲ್ಲಿ ಶಕ್ತಿ ಯೋಜನೆ ಮಾಡಿದ್ದೇವೆಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂಬ ಆಸೆಯಿಂದ ಕಾಂಗ್ರೆಸ್ ಎಷ್ಟು ಖರ್ಚು ಆಗುತ್ತದೆ, ಸಂಪನ್ಮೂಲ ಎಷ್ಟು ಬೇಕು ಎನ್ನುವುದನ್ನು ವಿಚಾರ ಮಾಡಲಿಲ್ಲ. ಸರ್ಕಾರ ಬಂದ ಬಳಿಕ ಎಲ್ಲ ಸೌಲಭ್ಯಗಳನ್ನು ಬಂದ್ ಮಾಡುತ್ತಿದೆ. ಆಸ್ಪತ್ರೆ, ಶಾಲೆ ಇತರೆ ಯೋಜನೆಗಳಿಗೆ ಕೊಡಲು ಹಣ ಇಲ್ಲ. ಮಳೆಯಾದಾಗ ಬಿಎಸ್‌ವೈ ಮನೆ ಹಾನಿಗೆ 5 ಲಕ್ಷ ರೂ. ಕೊಟ್ಟಿದ್ದರು. ಆಗ ಬಿಎಸ್‌ವೈ ಕೇಂದ್ರದ ದಾರಿ ಕಾದಿರಲಿಲ್ಲ. ಇವರು ಪ್ರತಿಯೊಂದಕ್ಕೂ ಕೇಂದ್ರದ ದಾರಿ ನೋಡುತ್ತಾರೆ ಎಂದು ಹರಿಹಾಯ್ದರು.
ಸರ್ಕಾರದಿಂದ ವೋಟ್ ಬ್ಯಾಂಕ್ ಪಾಲಿಟಿಕ್ಸ್: ಜವಾಬ್ದಾರಿಯುತ ಸರ್ಕಾರವಾಗಿ ನಡೆದುಕೊಳ್ಳುತ್ತಿಲ್ಲ. ಇವರು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಹುಬ್ಬಳ್ಳಿ, ಕೆಜಿ ಹಳ್ಳಿ, ಡಿಜೆ ಹಳ್ಳಿ ಕೇಸ್ ವಾಪಸ್ ಅಂದ್ರು. ಆಗ ಕೋಲಾರದಲ್ಲಿ ತಲ್ವಾರ್ ಕಟ್ಟಿದ್ದರು. ಬಳಿಕ ಶಿವಮೊಗ್ಗದಲ್ಲಿ ಕಟ್ಟಿದರು. ಶಿವಮೊಗ್ಗದ ಖಾಸಗಿ ಸಿಸಿಟಿವಿಯ ಕ್ಲಿಪಿಂಗ್ ಬಳಿಕ ಬಿಡುಗಡೆಯಾದವು. ಅದರಲ್ಲಿನ ದೃಶ್ಯ ಭಯ ಹುಟ್ಟಿಸುವಂತೆ ಇವೆ. ಮನೆಯೊಳಗೆ ನುಗ್ಗಿ ಹೊಡೆದಿದ್ದಾರೆ. ಈ ಧೈರ್ಯ ಹೇಗೆ ಬಂತು? ಗಲಭೆ ಮಾಡೋರಿಗೆ ಕಾಂಗ್ರೆಸ್ ಬಂದ್ರೆ ಕೇಸ್ ಹಾಕೊಲ್ಲ ಎಂಬ ಭಾವನೆ ಬಂದಿದೆ. ಪಾಕಿಸ್ತಾನ ಪರ ಇದ್ರೆ ಐಸಿಸ್ ಪರ ಇದ್ದರೂ ಕೇಸ್ ಹಾಕುವುದಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಅಂತ ಘೋಷಣೆ ಕೂಗುವವರನ್ನು ತಲ್ವಾರ್ ಹಿಡಿದು ಬೆದರಿಕೆ ಹಾಕೋರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರಸ್ ಸರ್ಕಾರದ ವಿರುದ್ಧ ಕುಟುಕಿದರು.
ಗಲಭೆ ಪ್ರಕರಣ ಕೇಸ್ ವಾಪಸ್ ಬೇಡ :ಹುಬ್ಬಳ್ಳಿ ಕೇಸ್ ವಾಪಸ್‌ಗೆ ಪತ್ರ ಬರೆದಿದ್ದಾರೆ. ಅವರು ಪೊಲೀಸ್ ಠಾಣೆ ಸುಡಲು ಬಂದವರು. ಪೊಲೀಸರನ್ನು ಕೊಲೆ ಮಾಡಲು ಬಂದವರು. ಅವರ ವಿರುದ್ಧ ಇದ್ದ ಕೇಸ್ ವಾಪಸ್ ಪಡೆಯುತ್ತಿರಾ? ನಾವು ಹಿಂದೆ ರೈತ ಹೋರಾಟಗಾರರ ಮೇಲಿನ ಕೇಸ್ ವಾಪಸ್‌ಗೆ ಪತ್ರ ಬರೆದಿದ್ದೆವು. ನಮ್ಮ ಪತ್ರ ಬಹಿರಂಗ ಮಾಡುತ್ತೇವೆ ಅಂತ ಡಿಕೆಶಿ ಹೇಳಿದ್ದಾರೆ.
ಯಾರನ್ನೂ ಯಾರಿಗೆ ಹೋಲಿಕೆ ಮಾಡುತ್ತ ಇದೀರಾ. ನೀವು ನಿಮಗೆ ಮತ ಹಾಕಿದ್ರೆ ಅವರು ಪಾಕ್, ಚೀನಾ ಪರ ಇದ್ದರೂ ಪರವಾಗಿಲ್ವಾ? ಸಮಾಜ, ರಾಜಕಾರಣ ಯಾವ ದಿಕ್ಕಿನತ್ತ ಒಯ್ಯುತ್ತಿದ್ದಿರಿ ನೀವು? ಡಿಕೆಶಿ ನಿಮ್ಮ ಪತ್ರ ನೋಡಿ ಜನ ಆತಂಕದಲ್ಲಿದ್ದಾರೆ. ಇದನ್ನು ವಿರೋಧಿಸಿ ನಾವೂ ಹೋರಾಟಕ್ಕೂ ಇಳಿಯುತ್ತೇವೆ. ಒಂದೇ ಒಂದು ಕೇಸ್ ವಾಪಸ್ ಪಡೆಯಬಾರದು, ಎಡಿಜಿಪಿ ಸಹ ಈ ಸೂಚನೆ ಧಿಕ್ಕರಿಸಬೇಕು ಎಂದು ಜೋಶಿ ಒತ್ತಾಯಿಸಿದರು.
ಶಾಮನೂರು ಹೇಳಿಕೆ ಸರ್ಕಾರ ಗಂಭೀರ ಪರಿಗಣಿಸಲಿ: ಲಿಂಗಾಯತರಿಗೆ ಅನ್ಯಾಯವೆಂದು ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಮನೂರು ಅವರು ಅತ್ಯಂತ ಹಿರಿಯರು ವೀರಶೈವ ಮಹಾಸಭಾ ಅಧ್ಯಕ್ಷರು. ಅವರು ಎಲ್ಲ ಮಾಹಿತಿ ಇಟ್ಟುಕೊಂಡು ಹೇಳಿರುತ್ತಾರೆ. ಅವರ ಹೇಳಿಕೆ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು. ಕೆಲವರು ತಾಲೂಕುಗಳು ಬರದಿಂದ ಉಳಿದಿವೆ. ಅದನ್ನು ಮೊದಲು ರಾಜ್ಯ ಸರ್ಕಾರ ಘೋಷಣೆ ಮಾಡಲಿ ಅವರು ಇನ್ನೂವರೆಗೂ ಪ್ರಸ್ತಾವನೆ ಸಲ್ಲಿಸಿಲ್ಲ. ಕಾವೇರಿ, ಬರ ವಿಷಯಕ್ಕೆ ಸ್ಪಂದಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಕೇಂದ್ರ ಬರ ಅಧ್ಯಯನ ತಂಡ ತಡವಾಗಿ ರಾಜ್ಯಕ್ಕೆ ಬಂದ ವಿಚಾರಕ್ಕೆ ಮಾತನಾಡಿದ ಅವರು, ರಾಜ್ಯದಿಂದ ಪ್ರಸ್ತಾಪ ಬಂದ ಬಳಿಕವೇ ಕೇಂದ್ರ ತಂಡ ಬರಬೇಕಾಗುತ್ತದೆ. ಅವರಿಂದ ಪ್ರಸ್ತಾಪ ಬಂದ ಬಳಿಕ ತಂಡ ಬಂದಿದೆ. ರಾಜ್ಯ ಸರ್ಕಾರ ಎಲ್ಲವನ್ನೂ ಕೇಂದ್ರದತ್ತ ತೋರಿಸಬಾರದು. ಬಿಎಸ್‌ವೈ ತ್ವರಿತವಾಗಿ ಸಹಾಯ ಮಾಡಿದ್ದರು. ಮೊದಲು ಜನರಿಗೆ ಸರ್ಕಾರ ಸ್ಪಂದಿಸಲಿ ಎಂದು ಹೇಳಿದರು.
ಸಚಿವ ಲಾಡ್ ಜವಾಬ್ದಾರಿಯಿಂದ ಮಾತನಾಡಲಿ: ಐಸಿಸ್ ಶಂಕಿತ ಉಗ್ರನಿಗೆ ಧಾರವಾಡ ಲಿಂಕ್ ವಿಚಾರ ಇರುವ ಬಗ್ಗೆ ಮಾತನಾಡಿದ ಅವರು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣವೆಂದು ಸಚಿವ ಲಾಡ್ ಹೇಳಿಕೆ ಹಿನ್ನೆಲೆ ಯುಪಿಎ ಕಾಲದಲ್ಲಿ ದೆಹಲಿಯಿಂದ ಹುಬ್ಬಳ್ಳಿಯವರೆಗೆ ಬಾಂಬ್ ಸ್ಫೋಟ ಆಗುತ್ತಿದ್ದವು. ಆದರೆ ದೇಶದೊಳಗೆ ಈಗ ಆ ಚಟುವಟಿಕೆ ಇಲ್ಲ. ಕಾಶ್ಮೀರದಲ್ಲಿಯೂ ಬಹಳ ಕಡಿಮೆ ಆಗಿವೆ. ಆದರೆ ಕೆಲವು ಕಡೆ ಉಗ್ರ ಚಟುವಟಿಕೆ ಮಾಡುವವರು ಇದ್ದಾರೆ. ಎಲ್ಲಿ ರಾಜ್ಯ ಸರ್ಕಾರದ ಸಿಂಪಥಿ ಇರುತ್ತದೆಯೋ ಅಲ್ಲಿ ಅವರು ಈ ಕಾರ್ಯ ಮಾಡುತ್ತಾರೆ. ಅಂತಹ ರಾಜ್ಯಗಳಲ್ಲಿ ಅಂಡರ್‌ಗ್ರೌಂಡ್ ಸೆಲ್‌ಗಳನ್ನು ಮಾಡುತ್ತಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರದ ಮಂತ್ರಿಗಳು ಬೇಜವಾಬ್ದಾರಿಯಿಂದ ಮಾತನಾಡಬಾರದು ಎಂದು ಜೋಶಿ ತಿರುಗೇಟು ನೀಡಿದರು.
ಶೌರ್ಯ ಜಾಗರಣ ಯಾತ್ರೆಗೆ ಚಾಲನೆ..ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಶೌರ್ಯ ಜಾಗರಣ ಯಾತ್ರೆಗೆ ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾಸ್ ಜೋಶಿ ಚಾಲನೆ ನೀಡಿದರು.
ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜ ಯೋಗೇಂದ್ರ ಸ್ವಾಮೀಜಿ, ಶಾಸಕ ಮಹೇಶ್ ಟೆಂಗಿನಕಾಯಿ ಉಪಸ್ಥಿತಿಯಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶೌರ್ಯ ಜಾಗರಣ ಯಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಇದನ್ನು ದೇಶಾದ್ಯಂತ ಮಾಡಲಾಗುತ್ತಿದ್ದು, ನಮ್ಮ ದೇಶದ ಚರಿತ್ರೆ ಮಹತ್ವ ಇತ್ಯಾದಿಗಳನ್ನು ಯುವಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಇದನ್ನೂಓದಿ:ಜಾತಿ ಗಣತಿ ಸಮಾಜಕ್ಕೆ ಮಾರಕವಲ್ಲ: ಸಿಎಂ ಸಿದ್ದರಾಮಯ್ಯ