ಹುಬ್ಬಳ್ಳಿ :ನರ್ಸ್ಗಳನ್ನು ಕುರಿತು ಕನ್ನಡ ಚಿತ್ರವೊಂದರ ಹಾಡಿಗೆ ರೀಲ್ಸ್ ಮಾಡಿ ಕಿಮ್ಸ್ ಆಸ್ಪತ್ರೆ 11 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆ ಕಿಮ್ಸ್ ಆಸ್ಪತ್ರೆಯ ನರ್ಸ್ಗಳಿಗೆ ಅಪಮಾನ ಮಾಡಲಾಗಿದೆ. ಈ 11 ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೆ ನರ್ಸ್ ಅಸೋಸಿಯೇಷನ್ ಅಧ್ಯಕ್ಷೆ ಸುನೀತಾ ನಾಯ್ಕ ಸೋಮವಾರ ದೂರು ಸಲ್ಲಿಸಿದ್ದರು.
ಹುಬ್ಬಳ್ಳಿ ಕಿಮ್ಸ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳ ನರ್ಸ್ಗಳನ್ನು ಗುರಿಯಾಗಿಟ್ಟುಕೊಂಡು ಯಾವುದೇ ಅನುಮತಿ ಪಡೆಯದೆ ರೀಲ್ಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಮತ್ತು ಧಾರವಾಡ ಜಿಲ್ಲಾ ಶುಶ್ರೂಷಕರ ಸಂಘ ವಿರೋಧ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಮಾತನಾಡಿದ ನರ್ಸ್ ಅಸೋಸಿಯೇಷನ್ ಅಧ್ಯಕ್ಷೆ ಸುನೀತಾ ನಾಯ್ಕ ಅವರು, ವಿಡಿಯೋವನ್ನು ನರ್ಸ್ ಗಳನ್ನು ಅಸಭ್ಯವಾಗಿ, ಅಗೌರವಿಸುವ ರೀತಿಯಲ್ಲಿ ಮಾಡಲಾಗಿದೆ. ಈ ಮೂಲಕ ನರ್ಸ್ ಗಳಿಗೆ ಅವಮಾನ ಮಾಡಲಾಗಿದ್ದು, ರಾಜ್ಯದೆಲ್ಲೆಡೆ ವಿಡಿಯೋ ವೈರಲ್ ಆಗಿದೆ. ಕೂಡಲೇ ಅವಮಾನ ಮಾಡಿದ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದರು.
ಇನ್ನು, ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಕಿಮ್ಸ್ನ ಪ್ರಿನ್ಸಿಪಾಲ್ ಡಾ. ಈಶ್ವರ ಹೊಸಮನಿ, ಈ ಬಗ್ಗೆ 6 ಜನರ ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ರೀಲ್ಸ್ ಮಾಡಿದ ವಿದ್ಯಾರ್ಥಿಗಳು ಬಂದು ಭೇಟಿಯಾಗಿದ್ದಾರೆ. ಅದಲ್ಲದೇ ತಮ್ಮದು ತಪ್ಪಾಗಿದೆ ಎಂದು ಕ್ಷಮೆಯನ್ನು ಕೇಳಿದ್ದಾರೆ. ಆದರೂ ವಿದ್ಯಾರ್ಥಿಗಳು ಮಾಡಿದ್ದು ಖಂಡನೀಯ, ಹೀಗಾಗಿ 11 ಜನ ವೈದ್ಯ ವಿದ್ಯಾರ್ಥಿಗಳನ್ನು ಒಂದು ವಾರ ಕಾಲ ಕಾಲೇಜಿನಿಂದ ಅಮಾನತ್ತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.