ಹುಬ್ಬಳ್ಳಿ:ಕೊರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕುಟುಂಬವನ್ನೂ ಲೆಕ್ಕಿಸದೆ ಸೇವೆ ಸಲ್ಲಿಸುವ ಮೂಲಕ ಹುಬ್ಬಳ್ಳಿ ವೈದ್ಯರೊಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಮೂಲಕ ಅಮೆರಿಕದ ಸಾಕ್ಷ್ಯಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಸಾಗರದಾಚೆಗೆ ಪಸರಿಸಿದ್ದಾರೆ.
ವಾಣಿಜ್ಯ ನಗರಿಯ 38 ವರ್ಷದ ಡಾ. ಶ್ರೀಧರ ಕುಲಕರ್ಣಿ ಎನ್ನುವವರೇ ಈ ಸಾಧನೆ ಮಾಡಿದವರು. ಇವರು ತಮ್ಮ ಕೆಲಸದ ಮೂಲಕ ಯುಎಸ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕೋವಿಡ್-19 ರೋಗಿಗಳ ಚಿಕಿತ್ಸೆ ಮಾತ್ರವಲ್ಲದೆ ವೈರಸ್ ಸುತ್ತಮುತ್ತಲಿನ ಭಾರತೀಯ ವೈದ್ಯರ ಕೆಲಸದ ಕುರಿತಾದ ಸಾಕ್ಷ್ಯಚಿತ್ರದಲ್ಲಿ ಸಹ ಕಾಣಿಸಿಕೊಂಡಿದ್ದಾರೆ.
ಲೂಯಿಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀಧರ ಕುಲಕರ್ಣಿ ಹಾಲಿವುಡ್ ಚಲನಚಿತ್ರ ಬರಹಗಾರ್ತಿ ಮತ್ತು ನಿರ್ಮಾಪಕಿ ಶ್ವೇತಾ ರಾಯ್ ನಿರ್ಮಿಸಿರುವ ‘ಎ ಪೆಂಡಾಮಿಕ್: ಅವೇ ಫ್ರಮ್ ದಿ ಮದರ್ ಲ್ಯಾಂಡ್ (2020)' ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರು ಭಾರತೀಯ ವೈದ್ಯರು ತಮ್ಮ ತಾಯ್ನಾಡಿನಿಂದ ಹೆತ್ತವರು ಹಾಗೂ ಕುಟುಂಬದಿಂದ ದೂರ ಉಳಿದುಕೊಂಡು ಸೇವೆ ಸಲ್ಲಿಸುತ್ತಿರುವುದನ್ನು ಸಾಕ್ಷ್ಯಚಿತ್ರದಲ್ಲಿ ಬಿಂಬಿಸಲಾಗಿದೆ.
ಡಾ. ಶ್ರೀಧರ ಮತ್ತು ಶ್ವೇತಾ ರಾಯ್ ದಂಪತಿ ಡಾ. ಶ್ರೀಧರ ಕುಲಕರ್ಣಿ ಕುಟುಂಬದ ಹಿನ್ನೆಲೆ:
ಶ್ರೀಧರ ಕುಲಕರ್ಣಿ ತಂದೆ-ತಾಯಿ ಸದ್ಯ ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ನಲ್ಲಿ ವಾಸವಾಗಿದ್ದು, ಇಬ್ಬರು ಸಹೋದರಿಯರಿಗೆ ಮದುವೆಯಾಗಿದೆ. ಡಾ. ಕುಲಕರ್ಣಿ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಲಘಟಗಿಯ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿ, ಅಲ್ಲಿ ಅವರು ಎಸ್ಎಸ್ಎಲ್ಸಿಯಲ್ಲಿ 20ನೇ ಱಂಕ್ ಪಡೆದರು. ನಂತರ ಧಾರವಾಡದ ಜೆಎಸ್ಎಸ್ನಲ್ಲಿ ಪಿಯುಸಿ ಮುಗಿಸಿ ಸಿಇಟಿಯಲ್ಲಿ 413ನೇ ಱಂಕ್ ಪಡೆದು, ಹುಬ್ಬಳ್ಳಿ ಕಿಮ್ಸ್ನಲ್ಲಿ ಎಂಬಿಬಿಎಸ್ಗೆ ಸೇರುತ್ತಾರೆ.
2006ರಲ್ಲಿ ಕಿಮ್ಸ್ ಹುಬ್ಬಳ್ಳಿಯಲ್ಲಿ ಪದವಿ ಪಡೆದರು. ನಂತರ ಸ್ಪ್ರಿಂಗ್‌ಫೈಲ್ಡ್ ಲಿನಾಯ್ಸ್‌ಗೆ ತೆರಳಿದರು. ಅಲ್ಲಿ ಎಂಡಿ ಕೋರ್ಸ್ ಮಾಡಿ ಸದ್ಯ ಲೂಸಿಯಾನ ರಾಜ್ಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಮೆಡಿಸಿನ್ ಸಿಮ್ಸ್ನಲ್ಲಿ 2018ರಿಂದ ಕೆಲಸ ಮಾಡುತ್ತಿದ್ದಾರೆ. ಡಾ. ಶ್ರೀಧರ ಅವರು ಐಸಿಯು ವಿಭಾಗದಲ್ಲಿ ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮ್ (ಎಆರ್ಡಿಎಸ್) ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಪರಿಣಿತಿ ಹೊಂದಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯಕೀಯ ಪದವಿ ಪಡೆದಿದ್ದ ಡಾ. ಶ್ರೀಧರ ಈ ರೀತಿಯ ಸಂಶೋಧನಾ ಅಧ್ಯಯನದಲ್ಲಿ ಅವರು ಗಮನಾರ್ಹ ಕೆಲಸ ಮಾಡಿದ್ದು, ಕೋವಿಡ್ ರೋಗಿಗಳ ಉಸಿರಾಟದ ಸಮಸ್ಯೆಗಳ ಅತ್ಯಂತ ಆತಂಕಕಾರಿ ಲಕ್ಷಣ ಗುರುತಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಕ್ಕೆ ಇಡೀ ಕುಟುಂಬ ಸಂತಸ ವ್ಯಕ್ತಪಡಿಸುತ್ತಿದೆ. ತಮ್ಮ ಮಗ ವೈದ್ಯಕೀಯ ಲೋಕದಲ್ಲಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಕುಟುಂಬ ಹಾಗೂ ಹುಬ್ಬಳ್ಳಿಯ ಕೀರ್ತಿ ಹೆಚ್ಚಿಸಲಿ ಎಂದು ಕುಟುಂಬಸ್ಥರು ಆಶಿಸುತ್ತಿದ್ದಾರೆ.
ಯುಎಸ್ ಡಾಕ್ಯುಮೆಂಟರಿಯಲ್ಲಿ ಡಾ. ಶ್ರೀಧರ: ಪೋಷಕರಿಗೆ ಸಂತಸ