ಹುಬ್ಬಳ್ಳಿ :ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಹುಬ್ಬಳ್ಳಿಯ ಸನಾ ಮಳಗಿ ಎಂಬ ಯುವತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಹಲವು ಪದಕಗಳನ್ನು ತಮ್ಮದಾಗಿಸಿಕೊಂಡ ಇವರು, ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಉತ್ತರ ಕರ್ನಾಟಕದ ಮೊದಲ ಯುವತಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರೌಢಶಾಲಾ ದಿನಗಳಲ್ಲಿ ಗುಂಡು ಎಸೆತದಲ್ಲಿ ಸನಾ ಆಸಕ್ತಿ ಹೊಂದಿದ್ದರು. ಅಂದು ರೈಲ್ವೆ ಇಲಾಖೆ ನೌಕರ ಅಬ್ದುಲ್ ಮುನಾಫ ಎಂಬುವರು ಪವರ್ಲಿಫ್ಟಿಂಗ್ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಸನಾಗೆ ನೆರವಾದರು.
ಕುಟುಂಬದವರಿಗೆ ತಿಳುವಳಿಕೆ ನೀಡಿ ಕ್ರೀಡೆಯಲ್ಲಿ ಸಾಧನೆ ಮಾಡಲು ಸಹಾಯ ಮಾಡಿದರು. ಅಂದಿನಿಂದ ಇಂದಿನವರೆಗೂ ಸನಾ ಪವರ್ ಲಿಫ್ಟಿಂಗ್‌ನಲ್ಲಿ ತಮ್ಮದೇ ಆದ ದಾಖಲೆ ಸೃಷ್ಟಿಸುತ್ತ ಮುನ್ನುಗ್ಗುತ್ತಿದ್ದಾರೆ.
ಇವರ ಸಹೋದರನ ದುಡುಮೆಯಿಂದ ಕುಟುಂಬ ಸಾಗುತ್ತಿದೆ. ಕ್ರೀಡೆಗೆ ತಗುಲುವ ಖರ್ಚು ನಿಭಾಯಿಸಿಕೊಳ್ಳಲು ಸ್ಥಳೀಯ ಜಿಮ್‌ನಲ್ಲಿ ತರಬೇತುದಾರರಾಗಿ ಸನಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡತನದ ಮಧ್ಯೆಯೂ ಕುಟುಂಬ ಸದಸ್ಯರು ಕ್ರೀಡಾಪಟುವನ್ನು ಬೆಂಬಲಿಸುತ್ತಿದ್ದಾರೆ.
2018ರಲ್ಲಿ ಏಷಿಯನ್ ಪವರ್ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ (ಸ್ಕಾಟ್, ಬೆಂಚ್ ಪ್ರೆಸ್, ಡೆಡ್ ಲಿಫ್ಟ್) ನಾಲ್ಕನೇ ಸ್ಥಾನ, (ಸ್ಕಾಟ್) ತೃತೀಯ ಸ್ಥಾನ ಪಡೆದಿದ್ದಾರೆ. 2017-18ರಲ್ಲಿ ಫೆಡರೇಶನ್ ಕಪ್ ಪವರ್ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಯೋಜಿಸುವ ರಾಜ್ಯಮಟ್ಟದ (ಪವರ್ಲಿಫ್ಟಿಂಗ್ 72 ಕೆ.ಜಿ) ವಿಭಾಗದಲ್ಲಿ ಸತತ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆಯುವ ಮೂಲಕ ಸ್ಟ್ರಾಂಗ್ ವುಮನ್ ಆಗಿದ್ದಾರೆ.