ಹುಬ್ಬಳ್ಳಿ:ಪ್ರತಿಯೊಂದು ಕಾರ್ಯಕ್ಕೂ ಪ್ರತಿಯೊಂದು ಯೋಜನೆಗೂ ಕಾಲಮಿತಿ ಹಾಗೂ ಪೂರ್ಣಗೊಳ್ಳುವ ದಿನಾಂಕ ಇರುತ್ತದೆ. ಆದರೆ ಹುಬ್ಬಳ್ಳಿ ಧಾರವಾಡ ಅವಳಿನಗರ ಸ್ಮಾರ್ಟ್ ಮಾಡುವ ಯೋಜನೆಗೆ ಮಾತ್ರ ಈ ಲಕ್ಷಣಗಳು ಕಾಣುತ್ತಿಲ್ಲ. ಕಾಮಗಾರಿ ಪ್ರಾರಂಭವಾಗಿ ವರ್ಷಗಳು ಗತಿಸುತ್ತಿವೆಯೇ ಹೊರತು, ಕಟ್ಟಡಗಳು ಮಾತ್ರ ತಳಮಟ್ಟದಿಂದ ಮೇಲೆ ಏಳುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅತೀ ವೇಗವಾಗಿ ಬೆಳೆಯುವತ್ತಿರುವ ಅವಳಿ ನಗರ. ಆದರೇ, ನಗರ ಬೆಳೆಯುತ್ತಿದೆಯೇ ಹೊರತು ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಮಾತ್ರ ಇನ್ನು ನೆಲಬಿಟ್ಟು ಮೇಲೆ ಎದ್ದೇಳುತ್ತಿಲ್ಲ. ಇದಕ್ಕೆ ಉದಾಹರಣೆ ಚೆನ್ನಮ್ಮ ವೃತ್ತದ ಬಳಿಯ ಹಳೇ ಬಸ್ ನಿಲ್ದಾಣ ಸಾಕ್ಷಿಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಆರಂಭಿಸಿದ ಒಂದೂವರೆ ವರ್ಷದಲ್ಲಿ ಪೂರ್ತಿಗೊಳಿಸುವುದಾಗಿ ಸ್ಮಾರ್ಟ್ ಸಿಟಿ ಕಂಪನಿ ಅಧಿಕಾರಿಗಳು ಭರವಸೆ ನೀಡಿದ್ದರು.
ಆದರೆ, ಎರಡು ವರ್ಷವಾಗುತ್ತ ಬಂದರೂ ಕಟ್ಟಡ ಕಾಮಗಾರಿ ಇನ್ನೂ ನೆಲ ಬಿಟ್ಟು ಮೇಲೆ ಎದ್ದಿಲ್ಲ. ಕಟ್ಟಡವನ್ನು ಕ್ಷಣಾರ್ಧದಲ್ಲಿಯೇ ಕೆಡವಿದ್ದ ಸ್ಮಾರ್ಟ್ ಸಿಟಿ ಇಲಾಖೆ ಮೇಲೆ ಎತ್ತುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನು, ಸಾಯಿ ಬಾಬಾ ಮಂದಿರದ ಎದುರಿನಲ್ಲಿರುವ ಮಲ್ಪಿ ಪಾರ್ಕಿಂಗ್ ಕಟ್ಟಡ ಕೂಡ ಕಳೆದ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕಟ್ಟಡ ನಿರ್ಮಾಣದ ನಂತರ ಫಿನಿಷಿಂಗ್ ಕೆಲಸವೇ ಕೈ ಹಿಡಿಯಲಿದ್ದು, ವರ್ಷಗಟ್ಟಲೇ ಸಮಯ ಬೇಕಾಗುತ್ತದೆ.