ಹುಬ್ಬಳ್ಳಿ/ಧಾರವಾಡ: ತೀವ್ರ ಜಿದ್ದಾಜಿದ್ದಿಯಂತಿದ್ದ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಗದ್ದುಗೆಯನ್ನು ಉಳಿಸಿಕೊಳ್ಳುವಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಯಶಸ್ವಿಯಾಗಿದೆ. ಬಿಜೆಪಿ- ಕಾಂಗ್ರೆಸ್ಗೆ ಪ್ರತಿಷ್ಠೆಯಾಗಿದ್ದ ಈ ಚುನಾವಣೆಯಲ್ಲಿ ಮತ್ತೊಮ್ಮೆ ಕಮಲ ಅರಳಿದೆ. ವಿಧಾನಸಭೆ ಚುಣಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಇದರಿಂದ ಮತ್ತೊಮ್ಮೆ ಹಿನ್ನಡೆ ಆಗಿದೆ. ಏಕೆಂದರೆ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಸ್ಥಾನ ಈ ಬಾರಿ ಕಾಂಗ್ರೆಸ್ಗೆ ಒಲಿಯುವಂತೆ ಮಾಡಬೇಕೆಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶೆಟ್ಟರ್‌ಗೆ ಟಾಸ್ಕ್ ಕೊಟ್ಟಿದ್ದರು. ಆದ್ರೆ ಇಲ್ಲಿ ಮತ್ತೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ.
ಹೌದು, ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂದು ಗುರುತಿಸಿಕೊಂಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಅಧಿಕಾರ ಉಳಿಸಿಕೊಂಡಿದೆ. ಮಹಾನಗರ ಪಾಲಿಕೆಯ 22ನೇ ಅವಧಿಗೆ ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಮೇಯರ್ ಅಭ್ಯರ್ಥಿ ವೀಣಾ ಭರದ್ವಾಡ್ ಅವರು 46 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಮೇಯರ್ ಅಭ್ಯರ್ಥಿಯಾಗಿದ್ದ ಸುವರ್ಣಾ ಕಲ್ಲಕುಂಟ್ಲಾ ಅವರು 37 ಮತಗಳನ್ನು ಪಡೆದು ಪರಾಭವಗೊಂಡರು.
ಬಿಜೆಪಿ ಅಭ್ಯರ್ಥಿ ವೀಣಾ ಭರದ್ವಾಡ್ ಪರ 46 ಜನ ಸದಸ್ಯರು ಕೈ ಎತ್ತುವ ಮೂಲಕ ಮತ ಮತ ಹಾಕಿ, ಸ್ಪಷ್ಟ ಬಹುಮತ ಸೂಚಿಸಿದರು. ಬಿಜೆಪಿ ಉಪಮೇಯರ್ ಅಭ್ಯರ್ಥಿ ಸತೀಶ ಹಾನಗಲ್ ಅವರಿಗೂ 46 ಜನ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಉಪಮೇಯರ್ ಅಭ್ಯರ್ಥಿಯಾಗಿದ್ದ ರಾಜು ಕಮತಿ ಅವರು ಕೇವಲ 37 ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣೆ ಹಿನ್ನೆಲೆ ಬಿಜೆಪಿ ಸದಸ್ಯರು ದಾಂಡೇಲಿಯಿಂದ ನೇರವಾಗಿ ಧಾರವಾಡ ಮಂದಾರ ಹೊಟೇಲ್ ಗೆ ಆಗಮಿಸಿದ್ದರು. ಅಡ್ಡ ಮತದಾನ ಮಾಡಬಹುದು ಎಂಬ ಭಯದಿಂದ ಬಿಜೆಪಿ ಸದಸ್ಯರು ದಾಂಡೇಲಿಯಲ್ಲಿ ಠಿಕಾಣಿ ಹೂಡಿದ್ದರು. ಹೀಗಾಗಿ ಇಂದು ನೇರವಾಗಿ ಹೋಟೆಲ್ ಕರೆಸಿ ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ಸಭೆ ನಡೆಸಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.