ಹುಬ್ಬಳ್ಳಿ :ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಎಸೆಯುವುದನ್ನು ತಪ್ಪಿಸಲು ಮತ್ತು ಅದರಿಂದಾಗುವ ತೊಂದರೆಗಳನ್ನು ತಡೆಯಲು ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆ ಯೋಜನೆಯನ್ನು ರೂಪಿಸಿದೆ. ಧಾರವಾಡ ತಾಲ್ಲೂಕಿನ ಶಿವಳ್ಳಿಯಲ್ಲಿ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಲು ಮುಂದಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಅಂದಾಜು 100 ಟನ್‌ಗಿಂತಲೂ ಹೆಚ್ಚು ಕಟ್ಟಡ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಕಟ್ಟಡಗಳನ್ನು ನಿರ್ಮಿಸುವಾಗ ಮತ್ತು ಹಳೆಯ ಕಟ್ಟಡಗಳನ್ನು ನೆಲಸಮ ಮಾಡುವಾಗ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆ ಬದಿ, ಖಾಲಿ ನಿವೇಶನಗಳು, ಜಲಮೂಲಗಳು ಹಾಗೂ ಕೆರೆಯಂಚುಗಳಲ್ಲಿ ಸುರಿಯಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.
ದಂಡ ವಿಧಿಸಿದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಶಿವಳ್ಳಿಯಲ್ಲಿ ಪಾಲಿಕೆಗೆ ಸೇರಿದ 67 ಎಕರೆ ಜಾಗ ಇದೆ. ಅದರಲ್ಲಿ ಐದು ಎಕರೆಯಲ್ಲಿ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗಲಿದೆ. ಈಗಾಗಲೇ ರಸ್ತೆ, ಶೌಚಾಲಯ, ಶೆಡ್ ಸೇರಿದಂತೆ ಮೂಲಸೌಕರ್ಯಗಳು ಸಿದ್ಧಗೊಂಡಿವೆ. ಘಟಕ ನಿರ್ಮಾಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 3.5 ಕೋಟಿ ಅನುದಾನ ಬಿಡುಗಡೆ ಆಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿ ಸಹ ಘಟಕ ನಿರ್ಮಾಣಕ್ಕೆ ಅನುದಾನ ಸಿಗಲಿದೆ.