ಹುಬ್ಬಳ್ಳಿ:ಮನೆ ಮನೆಯಿಂದ ಕಸ ಸಂಗ್ರಹಣ ಕಾರ್ಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮನೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸಿ ಸಂಪೂರ್ಣವಾಗಿ ಈ ವ್ಯವಸ್ಥೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಆಗಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿದ್ದು, ಟ್ಯಾಗ್ ಆಧಾರಿತ ಬಕೆಟ್‌ಗಳನ್ನು ಹಂಚಿಕೆ ಮಾಡವ ಮೂಲಕ ಬಕೆಟ್ ಯೋಜನೆ ಜಾರಿಗೆ ತರಬೇಕು ಎನ್ನುವ ಚರ್ಚೆಗಳು ಪಾಲಿಕೆಯಲ್ಲಿ ಶುರುವಾಗಿದೆ. ಈ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿದೆ.
ಹುಬ್ಬಳ್ಳಿ ಧಾರವಾಡವನ್ನು ಸ್ವಚ್ಛ ಮಹಾನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ 2.12 ಲಕ್ಷ ಮನೆಗಳಿಗೆ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್ (ಆರ್‌ಎಫ್‌ಐಡಿ) ಅಳವಡಿಸಲಾಗಿದೆ. ಇನ್ನೂ 30 ಸಾವಿರ ಮನೆಗಳಿಗೆ ಟ್ಯಾಗ್ ಅಳವಡಿಸುವುದು ಬಾಕಿಯಿದೆ.
ಕಸ ಸಂಗ್ರಹಿಸಲು ಆಗಮಿಸುವ ಪೌರ ಕಾರ್ಮಿಕರು, ಕಸ ತೆಗದುಕೊಂಡ ನಂತರ ಮನೆ ಮುಂಭಾಗದ ಟ್ಯಾಗ್ ರೀಡ್ ಮಾಡುವುದು ನಿಯಮ. ಆದರೆ ಕೆಲವಡೆ ಪೌರ ಕಾರ್ಮಿಕರು ಟ್ಯಾಗ್ ರೀಡ್ ಮಾಡುತ್ತಿದ್ದಾರೆ ಹೊರತು ಕಸ ಸಂಗ್ರಹಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. ಹಾಗಾಗಿ ಆರ್‌ಎಫ್‌ಐಡಿ ಟ್ಯಾಗ್ ಇರುವ ಬಕೆಟ್‌ಗಳನ್ನು ನೀಡಿದರೆ ಇದನ್ನು ತಪ್ಪಿಸಬಹುದು ಎನ್ನುವುದು ಪಾಲಿಕೆ ಚಿಂತನೆಯಾಗಿದೆ.
ಎಕ್ಸ್‌ಪೋವೊಂದರಲ್ಲಿ ಆರ್‌ಎಫ್‌ಐಡಿ ಟ್ಯಾಗ್ ಬಕೆಟ್‌ವೊಂದಕ್ಕೆ 200 ರೂ. ದರ ನೀಡಿ ಪ್ರತಿ ಮನೆಗೆ ಒಣ ಹಾಗೂ ಹಸಿ ಕಸಕ್ಕಾಗಿ ಎರಡು ಬಕೆಟ್‌ಗಳನ್ನು 2.12 ಲಕ್ಷ ಮನೆಗಳಿಗೆ ನೀಡಿದರೆ ಸರಿ ಸುಮಾರು 40 ಕೋಟಿ ರೂ. ಗೂ ಹೆಚ್ಚಿನ ಹಣ ಬೇಕಾಗುತ್ತದೆ. ದೊಡ್ಡ ಮೊತ್ತದ ಯೋಜನೆಗೆ ಪಾಲಿಕೆ ಆರ್ಥಿಕವಾಗಿ ಸದೃಢವಾಗಿದೆಯಾ ಎಂಬುವುದನ್ನು ಕೂಡ ಯೋಚಿಸಬೇಕಾಗಿದೆ.