ಹುಬ್ಬಳ್ಳಿ: ಹು-ಧಾ ಮಹಾನಗರದ ಬಿಆರ್‌ಟಿಎಸ್ ಕಾಮಗಾರಿ 90% ಪೂರ್ಣಗೊಂಡಿದ್ದು, ಬಿ.ಆರ್.ಟಿ.ಎಸ್ ರಸ್ತೆಯಲ್ಲಿ ಇನ್ನುಮುಂದೆ ಬಿಆರ್‌ಟಿಎಸ್ ಬಸ್ ಹೊರತುಪಡಿಸಿ ಯಾವುದೇ ವಾಹನಗಳೂ ಸಹ ಓಡಾಡಲ್ಲ ಎಂದು ಮಹಾನಗರ ಪೊಲೀಸ್ ಆಯುಕ್ತರಾದ ಎಂ.ಎನ್.ನಾಗರಾಜ ಹಾಗೂ ಬಿ.ಆರ್.ಟಿ.ಎಸ್ ನಿರ್ದೇಶಕ ಚೋಳನ್ ಅವರು ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ನವಲೂರ ಹೊರತುಪಡಿಸಿ ಬಿಆರ್‌ಟಿಎಸ್ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಆರ್‌ಟಿಎಸ್ ನಿಗದಿತ ರಸ್ತೆಯಲ್ಲಿ ಇನ್ನಿತರ ವಾಹನಗಳಿಗೆ ನಿರ್ಬಂಧ ಹೇರಲಾಗಿದ್ದು, ಕೆಲವೊಂದು ಕಡೇ ಮಿಕ್ಸ್ಡ್ ಟ್ರಾಫಿಕ್ ರೂಲ್ ಜಾರಿಗೊಳಿಸಲಾಗಿದೆ ಎಂದರು.
ಅವಶ್ಯಕತೆಗೆ ಅನುಗುಣವಾಗಿ ಫೈಯರ್ ವೆಹಿಕಲ್, ಅಂಬುಲೆನ್ಸ್ ಹಾಗೂ ಮಹಾನಗರ ಪೊಲೀಸ್ ಆಯುಕ್ತರ ಅನುಮೋದನೆ ಮೇರೆಗೆ ಪೊಲೀಸ್ ವಾಹನಗಳಿಗೆ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಸಾರ್ವಜನಿಕ ವಾಹನಗಳು ಈ ನಿಯಮ ಉಲ್ಲಂಘನೆ ಮಾಡಿ ಬಿಆರ್‌ಟಿಎಸ್ ರಸ್ತೆಯಲ್ಲಿ ಸಂಚಾರ ಮಾಡಿ ಬಸ್ ಸಂಚಾರಕ್ಕೆ ತೊಂದರೆ ನೀಡಿದರೆ ಐಪಿಸಿ 279 ಕಾಯ್ದೆ ಅಡಿಯಲ್ಲಿ ಕ್ರಮ ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಂಟಿ ಗೋಷ್ಠಿಯಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಹಾಗೂ ಬಿ.ಆರ್.ಟಿ.ಎಸ್ ನಿರ್ದೇಶಕ ಚೋಳನ್. ಈಗಾಗಲೇ 100 ಬಸ್ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿದಿನವೂ 650ರಿಂದ 700 ಟ್ರೀಪ್ ಪೂರ್ಣಗೊಳಿಸುತ್ತಿವೆ. ಇನ್ನು ಕೆಲವು ದಿನಗಳಲ್ಲಿ 100 ಬಸ್ ಕಾರ್ಯ ನಿರ್ವಹಿಸಲು ಬಿಆರ್‌ಟಿಎಸ್ ಬಸ್ ಆಗಮಿಸಲಿವೆ ಎಂದರು. ಅಲ್ಲದೇ ಜಂಕ್ಷನ್ಗಳ ಭದ್ರತೆಗಾಗಿ 32 ಜಂಕ್ಷನಗಳಲ್ಲಿ 64 ಹೋಮ್ ಗಾರ್ಡ್ ಹಾಗೂ ಇನ್ನಿತರ ಭದ್ರತೆಯನ್ನು ಪೊಲೀಸ್ ಇಲಾಖೆಯಿಂದ ನೀಡಲಾಗುತ್ತದೆ. ಅಲ್ಲದೇ ಹೋಮಗಾರ್ಡ್ ವೇತನವನ್ನು ಬಿಆರ್‌ಟಿಎಸ್ ಬರಿಸಲಿದೆ ಎಂದು ಅವರು ತಿಳಿಸಿದರು. ಇನ್ನು ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಜೋಡಿಸಲಾಗಿದ್ದು ಯಾವುದೇ ಅಹಿತಕರವಾಗಿ ವಾಹನ ಸವಾರರು ವರ್ತಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಅಲ್ಲದೇ ಸಾರ್ವಜನಿಕ ಸಂಚಾರಕ್ಕಾಗಿ ಹೆಚ್ಚುವರಿ ಸ್ಕೈವಾಕ್ ನಿರ್ಮಾಣ ಯೋಜನೆಯನ್ನು ಕೂಡ ಜಾರಿಗೊಳಿಸಲಾಗುವುದು ಎಂದರು.
ಬಿಆರ್ ಟಿ ಎಸ್ ಸಾರಿಗೆಯನ್ನು ಬೆಳಗ್ಗೆ 6 ರಿಂದ ರಾತ್ರಿ 10 ಕ್ಕೆ ಇದ್ದುದನ್ನು 12 ವರೆಗೆ ವಿಸ್ತರಿಸಲಾಗಿದ್ದು, ಈ ಸೇವೆಯನ್ನು ಸಾರ್ವಜನಿಕರಿಗೆ ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಬಳಿಕ ಮಾತನಾಡಿದ ಡಿಸಿಪಿ ರವೀಂದ್ರ ಗಡಾದಿ, ಬಿ.ಆರ್. ಟಿ.ಎಸ್ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಅಲ್ಲದೇ ಯಾವುದೇ ಇನ್ಸುರೆನ್ಸ್ ಕೂಡ ಕ್ಲೈಮ್ ಆಗುವುದಿಲ್ಲ ಎಂದರು.