ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಹಿಂತೆಗೆದುಕೊಳ್ಳಲು ಆಗಸ್ಟ್ 26ರ ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ವಾರ್ಡ್‍ಗಳಲ್ಲಿ ನಾಮಪತ್ರ ಸಿಂಧುವಾಗಿದ್ದ 486 ಅಭ್ಯರ್ಥಿಗಳ ಪೈಕಿ 66 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. 82 ವಾರ್ಡ್‍ಗಳಲ್ಲಿ ಅಂತಿಮವಾಗಿ 420 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಹು-ಧಾ ಪಾಲಿಕೆ ಚುನಾವಣೆ: 66 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಕಣದಲ್ಲಿ ಅಂತಿಮವಾಗಿ 420 ಅಭ್ಯರ್ಥಿಗಳಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಎಲ್ಲ 82 ವಾರ್ಡ್‍ಗಳಲ್ಲಿ ಕಣದಲ್ಲಿದ್ದಾರೆ. ಜೆಡಿಎಸ್-49, ಸಿಪಿಐ (ಎಮ್)- 01, ಬಿಎಸ್‍ಪಿ-07, ಎಎಪಿ-41, ಉತ್ತಮ ಪ್ರಜಾಕೀಯ-11, ಕರ್ನಾಟಕ ರಾಷ್ಟ್ರ ಸಮಿತಿ-4, ಎಐಎಂಐಎಂ-12, ಎಸ್‍ಡಿಪಿಐ-4, ಕರ್ನಾಟಕ ಶಿವಸೇನೆ-4, ಕರ್ನಾಟಕ ಜನಸೇವೆ ಪಾರ್ಟಿ-1, ಪಕ್ಷೇತರ-122 ಸೇರಿದಂತೆ ಒಟ್ಟು 420 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ಸಾಮಾನ್ಯ ವಾರ್ಡ್ 08ರಲ್ಲಿ ಅತಿ ಹೆಚ್ಚು ಅಂದರೆ 11 ಜನ ಉಮೇದುವಾರರು ಕಣದಲ್ಲಿ ಇದ್ದಾರೆ. ಹಿಂದುಳಿದ ‘ಬಿ’ ವರ್ಗಕ್ಕೆ ಮೀಸಲಿರುವ ವಾರ್ಡ್ 14, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ವಾರ್ಡ್ 19,44,57,80 ಹಾಗೂ ಪರಿಶಿಷ್ಟ ಜಾತಿ ಮೀಸಲಾಗಿರುವ ವಾರ್ಡ್ 58, ಈ ಆರು ವಾರ್ಡ್‍ಗಳಲ್ಲಿ ಅತಿ ಕಡಿಮೆ ಅಂದರೆ ತಲಾ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದಿದ್ದಾರೆ.