ಹು-ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರರಿಂದ ಮಾಹಿತಿ ಹುಬ್ಬಳ್ಳಿ:ಸ್ಥಳ ಮಹಜರು ಮಾಡಲು ಕರೆತಂದ ವೇಳೆ ಪಿಎಸ್ಐ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ನಟೋರಿಯಸ್ ರೌಡಿಶೀಟರ್ ಸತೀಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಗುಂಡೇಟು ತಿಂದ ರೌಡಿಶೀಟರ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಹು-ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ, ನಟೋರಿಯಸ್ ರೌಡಿಶೀಟರ್ ಸತೀಶನನ್ನು ಕರೆದುಕೊಂಡು ಸ್ಥಳ ಮಹಜರಿಗೆ ಹೋದಾಗ, ಆತ ಪಿಎಸ್ಐ ವಿನೋದ ಅವರಿಗೆ ಕಲ್ಲಿನಿಂದ ಹೊಡೆದು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದಾಗ ಫೈರಿಂಗ್ ಮಾಡಲಾಗಿದೆ ಎಂದು ತಿಳಿಸಿದರು.
ಸತೀಶ ನಟೋರಿಯಸ್ ರೌಡಿಶೀಟರ್ ಆಗಿದ್ದಾನೆ. ಈತನ ಮೇಲೆ 5ಕ್ಕೂ ಹೆಚ್ಚು ಪ್ರಕರಣಗಳಿವೆ. ಕೊಲೆ, ಕೊಲೆಯತ್ನ, ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ನಗರದ ವಿವಿಧ ಠಾಣೆಯಲ್ಲಿ ದಾಖಲಾಗಿವೆ. ಈತ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಇನ್ಸ್ಪೆಕ್ಟರ್ ರಫೀಕ ತಹಶೀಲ್ದಾರ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ರೂ ನಿಲ್ಲದಿದ್ದಾಗ ಕಾಲಿಗೆ ಗುಂಡು ಹಾರಿಸಲಾಗಿದೆ. ಅವಳಿನಗರಲ್ಲಿ ರೌಡಿ ಶೀಟರ್ಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ರೌಡಿ ಮುಕ್ತ ವಾಣಿಜ್ಯ ನಗರಿಯನ್ನಾಗಿಸಲು ರೌಡಿಗಳು ಯಾರೇ ಇರಲಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕಳೆದ ಕೆಲ ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರೇಣುಕಾ ಸುಕುಮಾರ ಎಚ್ಚರಿಕೆ ನೀಡಿದರು.
ಕೊಲೆಗೆ ಸಂಚು ರೂಪಿಸಿದ್ದ ನಟೋರಿಯಸ್ ರೌಡಿ: ವ್ಯಕ್ತಿಯೋರ್ವನ ಕೊಲೆಗೆ ನಟೋರಿಯಸ್ ರೌಡಿ ಸತೀಶ್ ಸಂಚು ರೂಪಿಸಿದ್ದ. ಅಂತೆಯೇ ಶನಿವಾರ ತಲ್ವಾರ್ ಹಿಡಿದುಕೊಂಡು ಗದಗ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ಕುಳಿತಿದ್ದ. ಈ ಕುರಿತು ಮಾಹಿತಿ ಬರುತ್ತಿದ್ದಂತೆ ಪಿಎಸ್ಐ ವಿನೋದ್ ಸ್ಥಳಕ್ಕೆ ತೆರಳಿ ರೌಡಿ ಸತೀಶನನ್ನ ಬಂಧಿಸಲು ಮುಂದಾಗಿದ್ದರು. ಈ ವೇಳೆ ಕೂಡ ರೌಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಪೊಲೀಸರು ಬಂಧಿಸಿ, ಠಾಣೆಗೆ ಕರೆತಂದಿದ್ದರು. ಆ ಬಳಿಕ ಸ್ಥಳ ಮಹಜರಿಗೆ ಕರೆದುಕೊಂಡ ಹೋದ ವೇಳೆ ಪಿಎಸ್ಐ ಮೇಲೆ ರೌಡಿಶೀಟರ್ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು, ರೌಡಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸಿನಿಮಾ ಸ್ಟೈಲ್ನಲ್ಲಿ ರೌಡಿ ಬಂಧನ: ತಲ್ವಾರ್ ಹಿಡಿದು ಕುಳಿತಿದ್ದ ರೌಡಿಯನ್ನು ಸಿನಿಮೀಯ ರೀತಿಯಲ್ಲಿ ಶನಿವಾರ ಮಧ್ಯಾಹ್ನ ಪಿಎಸ್‌ಐ ವಿನೋದ ಆ್ಯಂಡ್ ಟೀಮ್ ಅರೆಸ್ಟ್ ಮಾಡಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ.
ಇದನ್ನೂ ಓದಿ:ಹೆಣ್ಣು ಭ್ರೂಣ ಪತ್ತೆ-ಗರ್ಭಪಾತ: ವೈದ್ಯ ಸೇರಿ ಮತ್ತೆ ಐವರ ಬಂಧನ; ಆರೋಪಿಗಳ ಸಂಖ್ಯೆ 9ಕ್ಕೇರಿಕೆ