ಹುಬ್ಬಳ್ಳಿ:ಹುಬ್ಬಳ್ಳಿಯ ಯುವಕ ಅಂಕುಶ್ ಕೊರವಿ ಆಸ್ಟ್ರ್ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಸ್ವದೇಶಿ ಪಿಸ್ತೂಲ್ ಅಭಿವೃದ್ಧಿ ಪಡಿಸುತ್ತಿದ್ದಾರೆ. ಈ ಮೂಲಕ ರಾಜ್ಯ ಹಾಗೂ ಹುಬ್ಬಳ್ಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಆತ್ಮ ನಿರ್ಭರ ಭಾರತದ ಮೊದಲ ಸ್ವದೇಶಿ ಪಿಸ್ತೂಲ್ ಅನ್ನು ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಭಾರತೀಯ ಸೇನೆಗೆ, ರಾಷ್ಟ್ರದ ಸಶಸ್ತ್ರ ಪಡೆಗಳ ಹಾಗೂ ಪೊಲೀಸ್ ಇಲಾಖೆಗೆ ತಾವೇ ಸಂಶೋಧನೆ ಮಾಡಿರುವ ವಿವಿಧ ಆಯುಧಗಳನ್ನು ಒದಗಿಸುವ ಕನಸು ಕಟ್ಟಿಕೊಂಡಿದ್ದಾರೆ.
ಈಗಾಗಲೇ ಭಾರತೀಯ ಸೇನೆಯಲ್ಲಿ ಹಳೆಯ ಕಾಲದ ಎರಡನೇ ವಿಶ್ವಯುದ್ಧದ ಯುಗದ ಬಂದೂಕುಗಳು ಬಳಕೆಯಲ್ಲಿದ್ದು, ಇಷ್ಟರವರೆಗೂ ಭಾರತದಲ್ಲಿ ಯಾವುದೇ ಆಧುನಿಕ ಸ್ವದೇಶಿ ಪಿಸ್ತೂಲ್ ಇರಲಿಲ್ಲ. ಅದನ್ನು ಗಮನದಲ್ಲಿ ಇಟ್ಟುಕೊಂಡು ಪಿಸ್ತೂಲ್ ಆವಿಷ್ಕರಿಸಲಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದಾಗಲೇ ಇಂತಹದೊಂದು ಕಾರ್ಯಕ್ಕೆ ಮುಂದಾಗಿರುವ ಅಂಕುಶ್ ಹೊಸ ತಂತ್ರಜ್ಞಾನದ ಸ್ವದೇಶಿ ಪಿಸ್ತೂಲ್ ಒದಗಿಸುವ ಕನಸು ಕಂಡಿದ್ದಾರೆ. ಭಾರತೀಯ ಸೇನೆ ಬಲಪಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಇಲ್ಲಿ ಎಲ್ಲವೂ ಸ್ವದೇಶಿ.. ವಿದೇಶದಿಂದ ಒಂದೇ ಒಂದು ಬಿಡಿ ಭಾಗ ತರಿಸಿಲ್ಲ:ಈ ಪಿಸ್ತೂಲ್ಗಳಲ್ಲಿ ಯಾವ ಸಣ್ಣ ಬಿಡಿಭಾಗವೂ ವಿದೇಶದಿಂದ ತರಿಸಿದ್ದಲ್ಲ. ಎಲ್ಲವೂ ಭಾರತದ್ದೇ ಆಗಿದೆ. ಮಿಲಿಟರಿ ಮತ್ತು ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಅನುಭವಿ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಮಾಹಿತಿ ಆಧಾರದಲ್ಲಿ, ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ATAL ಮಾಡ್ಯುಲರ್ ಪಿಸ್ತೂಲ್ ಅನ್ನು ನಮ್ಮ ಸೈನಿಕರಿಗೆ, ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತದೆ ಎಂದು ಅಂಕುಶ್ ಕೊರವಿ ಹೇಳಿದ್ದಾರೆ.
ಒಬ್ಬ ಯುವಕ ರಕ್ಷಣಾ ವಲಯದ ಸಾಮಗ್ರಿಗಳನ್ನು ಅದರಲ್ಲೂ ಆಯುಧಗಳ ವಿಚಾರಕ್ಕೆ ಬಂದಾಗ ಅಷ್ಟು ಸುಲಭಗವಾಗಿ ತಯಾರಿಸಲು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ನಿಯಂತ್ರಣಗಳಿರುತ್ತದೆ. ಆದರೆ, ಯಾವುದೇ ಹಂತದಲ್ಲಿ ನಿರಾಶೆಗೊಳಗಾಗದೇ ತಮ್ಮ ಹುಮ್ಮಸ್ಸಿನಿಂದ ಈ ಹಂತದವರೆಗೆ ಬಂದಿದ್ದಾನೆ. ಸದ್ಯಕ್ಕೆ ಇದನ್ನು ಪ್ರೋಟೋಟೈಪ್ ಮಾಡಿದ್ದಾನೆ.
ಇನ್ನು ಮುಂದೆ ಸರ್ಕಾರ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ನೋಡಿ, ಅಪ್ರೂವ್ ಮಾಡಿದ ನಂತರ ಅದನ್ನು ತಯಾರಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನಿವೃತ್ತ ಸೈನ್ಯಾಧಿಕಾರಿ ಮೇಜರ್ ಸಿ ಎಸ್ ಆನಂದ್.
ಅಟಲ್ ಪಿಸ್ತೂಲ್ ವಿಶೇಷತೆ ಏನು?:ಈ ಪಿಸ್ತೂಲ್ ಪರಿಸ್ಥಿತಿಗನುಸಾರ ಬದಲಾಯಿಸಬಹುದಾದ ಫೈರ್ ಕಂಟ್ರೋಲ್ ಹೊಂದಿದೆ. ಮೂರು ವಿಶಿಷ್ಟವಾದ ಆ್ಯಕ್ಷನ್ ಮೆಕ್ಯಾನಿಸಂ ಹೊಂದಿರುವುದರಿಂದ ಡ್ಯೂಟಿ ಸಮಯದಲ್ಲಿ ಚಲನೆಯಲ್ಲಿ ಮತ್ತು ಮರೆಮಾಚಿ ಬಳಸಲು ಸಹಕಾರಿಯಾಗಿದೆ. (ಪೇಟೆಂಟ್ ಬಾಕಿ ಉಳಿದಿದೆ) ಇದು ವಿಶ್ವದ ಅತ್ಯಂತ ಸುರಕ್ಷಿತ ಹಾಗೂ ಸುಲಭವಾಗಿ ಕ್ಯಾರಿ ಮಾಡಬಹುದಾದ ಪಿಸ್ತೂಲ್.
ಭಾರತೀಯ ಬಳಕೆದಾರರ ಮತ್ತು ಭಾರತೀಯ ನೈಸರ್ಗಿಕ ಪರಿಸ್ಥಿತಿಗಳಿಗೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಮಿಶ್ರಲೋಹದ ಉಕ್ಕಿನ ಸ್ಲೈಡ್ ಮತ್ತು ಪಾಲಿಮರ್ ಫ್ರೇಮ್ ಬಳಸಿರುವುದರಿಂದ ಪಿಸ್ತೂಲ್ ಹಗುರವಾಗಿದ್ದು, ಮೂರು ಮ್ಯಾಗಜೀನ್ ಸಾಮರ್ಥ್ಯದ (15/17/21 ಸುತ್ತುಗಳ ಸಾಮರ್ಥ್ಯ) ಆಯ್ಕೆಗಳನ್ನು ಒಳಗೊಂಡಿದೆ. ATAL ಪಿಸ್ತೂಲ್ ಅನ್ನು ಎರಡು ಕ್ಯಾಲಿಬರ್ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, 9x19mm ಸಶಸ್ತ್ರ ಪಡೆಗಳ ಬಳಕೆಗಾಗಿ ಮತ್ತು 0.32 ಸೈಜಿನದ್ದು ಪರವಾನಗಿ ಪಡೆದ ನಾಗರಿಕರಿಗಾಗಿ ಸಿದ್ಧಪಡಿಸಲಾಗಿದೆ.
ಈ ಶಸ್ತ್ರಾಸ್ತ್ರವು ಆಧುನಿಕ ಹಾಗೂ ಸ್ಥಳೀಯ ಬೇಡಿಕೆಗಳಿಗೆ ತಕ್ಕುದಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಹಳೆಯ ಪಿಸ್ತೂಲ್ಗಳು ಮತ್ತು ಅತಿಯಾದ ಬೆಲೆಯ ಆಮದು ಮಾಡಿದ ಪಿಸ್ತೂಲ್ಗಳಿಗೆ ಇದು ಪರ್ಯಾಯವಾಗಿದೆ. ಇದು ನಮ್ಮ ಸಶಸ್ತ್ರ ಪಡೆಗಳ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮತ್ತು ರಾಜ್ಯ ಪೊಲೀಸ್ ಪಡೆಗಳ ಸಾಮರ್ಥ್ಯ ಹೆಚ್ಚಿಸಲಿದೆ ಎನ್ನುತ್ತಾನೆ ಅಂಕುಶ್.