ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಹುಬ್ಬಳ್ಳಿ :ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹುಬ್ಬಳ್ಳಿ-ಅಂಕೋಲ ರೈಲು ಯೋಜನೆ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ಮರುಜೀವ ಸಿಕ್ಕಿದೆ. ಈ ಹಿಂದೆ ಯೋಜನೆ ಅನುಷ್ಟಾನಕ್ಕೆ ಕಾಲ ಕೂಡಿ ಬಂತೆನ್ನುವಷ್ಟರಲ್ಲಿ ಪರಿಸರ ಹಾಗೂ ವನ್ಯ ಜೀವಿ ಸಂರಕ್ಷಣ ಇಲಾಖೆ ಅನುಮತಿ ನಿರಾಕರಿಸಿತ್ತು. ಜನವರಿ 27ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆಗೆ ಸಂಬಂಧಿಸಿ ಅಧ್ಯಯನ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಯೋಜನೆಗೆ ಸಂಬಂಧಿಸಿದಂತೆ ಹೊಸ ಸಮಿತಿ ರಚಿಸಿ ಪರಿಷ್ಕೃತ ವಿಸ್ತೃತ ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ದೇಶನ ನೀಡಿದೆ. ಇದು ಹೊಸ ಆಶಾಭಾವ ಹುಟ್ಟು ಹಾಕಿದೆ. ವನ್ಯಜೀವಿ ಮಂಡಳಿ ಹೆಚ್ಚುವರಿ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಧಾರವಾಡ ಐಐಟಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು, ರಾಷ್ಟ್ರೀಯ ಹೆದ್ದಾರಿ, ಕರ್ನಾಟಕ ಸರಕಾರ, ರೈಲ್ವೆ ಇಲಾಖೆ, ಗತಿ ಶಕ್ತಿ ಯೋಜನಾ ತಜ್ಞರು ಹಾಗೂ ಕೇಂದ್ರ ಲೋಕೋಪಯೋಗಿ ಇಲಾಖೆ ಮುಖ್ಯಸ್ಥರ ಒಳಗೊಂಡ ಸಮಿತಿ ರಚಿಸಬೇಕು. ಈ ಸಮಿತಿಯು ವರ್ಕ್‌ಶಾಪ್‌ಗಳ ಮೂಲಕ ಸಮಗ್ರ ವಿಚಾರಗಳನ್ನು ಮಂಡಿಸಿ ನಂತರ ಸಮಗ್ರ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ,ಮೊದಲು ಯೋಜನೆ ಹಲವು ಋಣತ್ಮಕ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಯೋಜನೆ ಕೇಂದ್ರಕ್ಕೆ ಹೋದ ಬಳಿಕ ಇದೀಗ ಒಂದು ತಂಡ ಇದಕ್ಕೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳನ್ನು ನಡೆಸಿ ಧನಾತ್ಮಕ ವರದಿ ಸಿದ್ಧಪಡಿಸಿದೆ. ನಾನೂ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು.
ಕಳೆದ ವರ್ಷ ಕೂಡ ಉತ್ತರ ಕರ್ನಾಟಕ ನಿವೃತ್ತ ಅರಣ್ಯ ಅಧಿಕಾರಿಗಳ ಸಂಘವು, ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ ಜೀವ ವೈವಿಧ್ಯತೆಗೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಹಾನಿಕರವಾಗಿದೆ. ಯೋಜನೆ ಜಾರಿ ಮಾಡುವ ಅಗತ್ಯತೆ ಇಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಪಶ್ಚಿಮ ಘಟ್ಟಗಳಲ್ಲಿರುವಷ್ಟು ಜೈವಿಕ ವೈವಿಧ್ಯತೆ ದಕ್ಷಿಣ ಭಾರತದ ಬೇರೆ ಯಾವುದೇ ಜಿಲ್ಲೆಯಲ್ಲೂ ಕಂಡುಬರುವುದಿಲ್ಲ. ಈ ಯೋಜನೆಯಿಂದ ಅಳಿವಿನಂಚಿನಲ್ಲಿರುವ 325ಕ್ಕೂ ಹೆಚ್ಚು ಜಾತಿಯ ಸಸ್ಯ, ಪ್ರಾಣಿ, ಪಕ್ಷಿಗಳು, ಸರಿಸೃಪಗಳಿಗೆ ಹಾನಿಯಾಗುತ್ತದೆ. ಅಸಂಖ್ಯಾತ ಔಷಧೀಯ ಗುಣವುಳ್ಳ ಸಸ್ಯಗಳು, ಹಣ್ಣಿನ ಜಾತಿಯ ಹಲವು ರೀತಿಯ ಬೃಹತ್ ಮರಗಳು ಮತ್ತು ವಿಶಾಲ ಹುಲ್ಲುಗಾವಲಿದ್ದು ಜಲಾನಯನ ಪ್ರದೇಶವಾಗಿದೆ. ರೈಲು ಯೋಜನೆಯಿಂದ ಇದಕ್ಕೆ ಹಾನಿಯಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿತ್ತು.
ಇದನ್ನೂ ಓದಿ:NWKRTCಯ ಚಾಲಕ ತರಬೇತಿಯಲ್ಲಿ ಲಂಚದ ಆರೋಪ: ತನಿಖೆಗೆ ಆದೇಶಿಸಿದ ಎಂಡಿ