ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ವಿಮಾನ ನಿಲ್ದಾಣ ಉನ್ನತೀಕರಣ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಮಹತ್ವದ ಸಭೆ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಮತ್ತಷ್ಟು ಮೇಲ್ದರ್ಜೆಗೆ ಏರಲಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಪ್ರಹ್ಲಾದ್ ಜೋಶಿ ಸಭೆ
ಪ್ರಹ್ಲಾದ್ ಜೋಶಿ ಸಭೆ

By

Published : Jul 3, 2023, 10:41 PM IST

ಹುಬ್ಬಳ್ಳಿ :ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಸೇರಿದಂತೆ ಇತರ ಸೌಲಭ್ಯಗಳ ಬೃಹತ್ ಸುಧಾರಣೆ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕೇಂದ್ರ ಸಚಿವರು, ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಮತ್ತಷ್ಟು ಮೇಲ್ದರ್ಜೆಗೆ ಏರಲಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜೋಶಿ ಅವರು, ಹುಬ್ಬಳ್ಳಿ-ಧಾರವಾಡ ರಾಜ್ಯದ 2ನೇ ಅತೀ ದೊಡ್ಡ ನಗರವಾಗಿದ್ದು ಹಾಗೂ ಧಾರವಾಡದಲ್ಲಿ ಭಾರತೀಯ ತಾಂತ್ರಿಕ ಸಂಸ್ಥೆ (IIIT) ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಂತಹ ಬೃಹತ್ ಸಂಸ್ಥೆಗಳ ಕಾರ್ಯಾರಂಭ ಮಾಡಿದೆ. ಹೀಗಾಗಿ ಹೆಚ್ಚುತ್ತಿರುವ ವಿಮಾನ ಪ್ರಯಾಣಿಕರ ಸಂಖ್ಯೆ ಹಿನ್ನೆಲೆಯಲ್ಲಿ ಸಚಿವರು ಈಗಿರುವ ಟರ್ಮಿನಲ್ ಕಟ್ಟಡದ ವಿಸ್ತೀರ್ಣ, ರನ್‌ವೇ ವಿಸ್ತೀರ್ಣ, ಆಪಾನ್ ವಿಸ್ತೀರ್ಣ ಹಾಗೂ ಕಾರ್ಗೋ ನಿರ್ವಹಣೆ ಸುಧಾರಣೆ ಮುಂತಾದ ಕಾರ್ಯ ಕೈಗೊಳ್ಳಲು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಕಳೆದ ತಿಂಗಳಷ್ಟೇ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಉತ್ತರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಎಲ್ಲಾ ಸುಧಾರಣಾ ಕಾರ್ಯದ ಪ್ರಸ್ತಾವನೆ ತೀವ್ರ ಪರಿಶೀಲನೆ ನಡೆಸಿ ಈ ಒಂದು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ನೂತನ ಯೋಜನೆಯಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ 20,000 ಚ.ಮೀ. ವಿಸ್ತರಣೆಗೊಳ್ಳಲಿದ್ದು, ಏಕಕಾಲಕ್ಕೆ 1400ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ಸಭೆಯಲ್ಲಿ ಕೇಂದ್ರ ಸಚಿವ ಜೋಶಿ ಅವರೊಂದಿಗೆ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಕುಮಾರ್ ಠಾಕ್ರೆ ಮತ್ತು ಇತರ ಅಧಿಕಾರಿಗಳು, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು. ಇತ್ತೀಚಿನ ದಿನಗಳಲ್ಲಿ ಕೈಗೊಂಡ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ಅಗಾಧ ಬೆಳವಣಿಗೆ ಕಂಡಿದೆ. ಈ ಬಗ್ಗೆ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಸಾಕಷ್ಟು ನವೀಕರಣ ಕಾಣಲಿದ್ದು, ಇದು ಪ್ರಯಾಣಿಕರಿಗೆ ಅದ್ಭುತ ಅನುಭವವನ್ನು ನೀಡಲಿದೆ ಮತ್ತು ಕಾರ್ಗೋ ವಿಭಾಗದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಸಾಧನೆಯು ತನ್ನ ಗಮ್ಯಸ್ಥಾನ ವಿಸ್ತರಿಸಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ಈಗಿನ 3600 ಚದರ ಮೀಟರ್ ಗಾತ್ರದ ಟರ್ಮಿನಲ್ ಕಟ್ಟಡ ಈಗ ಹಾಲಿ ಪ್ರತಿ ವರ್ಷ 5 ಲಕ್ಷ ಪ್ರಯಾಣಿಕರ ನಿರ್ವಹಣೆಯ ಒಂದೇ ಸಮಯಕ್ಕೆ 300 ಪ್ರಯಾಣಿಕರಂತೆ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 20 ಸಾವಿರ ಚೌರಸ್ ಮೀಟರ್ ಗಾತ್ರದ 1400 ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯದ 3 ಏರೋಬ್ರಿಜ್ ಸೇರಿದಂತೆ ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ಪರಿವರ್ತಿಸುವ ಯೋಜನೆ, ಈಗಿನ 2600X45 ಮೀ. ಗಾತ್ರದ ರನ್‌ ವೇ ಹೆಚ್ಚಳ ಹಾಗೂ ಈಗಿರುವ ಅಪಾನ್ ಗಾತ್ರದ ಹೆಚ್ಚಳ ಸೇರಿದಂತೆ ಸಮಗ್ರವಾಗಿ ನಿಲ್ದಾಣದ ಅಭಿವೃದ್ಧಿ ಮಾಡಲಾಗುತ್ತಿದೆ.

ಇದನ್ನೂ ಓದಿ :Hubli airport: ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್‌ ವಿಸ್ತರಣೆಗೆ ₹ 273 ಕೋಟಿ ಬಿಡುಗಡೆ, ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯ ಆರಂಭ: ಪ್ರಹ್ಲಾದ್​ ಜೋಶಿ

ABOUT THE AUTHOR

...view details