ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಮಳೆಗೆ ವಿಮಾನ ನಿಲ್ದಾಣದ ಕಾಂಪೌಂಡ್ ಗೋಡೆ ನಾಲ್ಕು ಕಡೆ ಕುಸಿದಿದ್ದು, ವಿಮಾನ ನಿಲ್ದಾಣದಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸುವ ಕಾಮಗಾರಿ ಇತ್ತೀಚೆಗೆ ಮುಗಿದು ಪ್ರತಿನಿತ್ಯ ಹತ್ತಾರು ವಿಮಾನಗಳು ದೇಶದ ವಿವಿಧೆಡೆ ಸಂಚರಿಸುತ್ತಿವೆ. ರನ್‌ವೇ ವಿಸ್ತರಣೆಯಾಗಿದ್ದು, ಹೊಸ ಲಾಂಜ್ ಕೂಡ ನಿರ್ಮಾಣವಾಗಿದೆ. ಉಡಾನ್ ಯೋಜನೆಯಲ್ಲಿ ಮತ್ತಷ್ಟು ವಿಮಾನಗಳ ಹಾರಾಟಕ್ಕೆ ವಾಣಿಜ್ಯ ನಗರಿ ಸನ್ನದ್ಧವಾಗುತ್ತಿದೆ. ಆದರೆ ಇತ್ತೀಚೆಗೆ ಸುರಿದ ಮಳೆಗೆ ವಿಮಾನ ನಿಲ್ದಾಣದ ಸುತ್ತಮುತ್ತ ಸುಮಾರು ನಾಲ್ಕು ಕಡೆಗಳಲ್ಲಿ ಕಾಂಪೌಂಡ್ ಗೋಡೆ ಕುಸಿದಿದೆ.
ವಿಮಾನ ನಿಲ್ದಾಣದ ತಡೆ ಗೋಡೆ ಕುಸಿತ ತಾರಿಹಾಳ ಸೇತುವೆಯಿಂದ ಗಾಮನಗಟ್ಟಿಗೆ ತೆರಳುವ ರಸ್ತೆ ಪಕ್ಕದಲ್ಲಿನ ಕಾಂಪೌಂಡ್ ಗೋಡೆ ಸಂಪೂರ್ಣ ನೆಲಕಚ್ಚಿದೆ. ಈ ಸ್ಥಳದಲ್ಲಿ ತಾತ್ಕಾಲಿಕವಾಗಿ ತಗಡಿನ ಶೀಟ್ಗಳನ್ನು ಜೋಡಿಸಿ ಮುಚ್ಚಲಾಗುತ್ತಿದೆ. ಆದರೆ ನಾಯಿ, ಹಂದಿ ಮತ್ತು ದನಕರುಗಳು ಸೇರಿದಂತೆ ಮನುಷ್ಯರು ಸಲೀಸಾಗಿ ವಿಮಾನ ನಿಲ್ದಾಣದ ರನ್‌ವೇ ವರೆಗೆ ನುಸುಳಿಕೊಂಡು ಹೋಗಬಹುದಾಗಿದೆ. ಇದರಿಂದಾಗಿ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲ್ಪಡುವ ರನ್ ವೇಗೆ ಅಭದ್ರತೆ ಕಾಡುತ್ತಿದೆ.
ಕಳೆದ ಒಂದು ವಾರದಿಂದ ಮುಂಗಾರು ಮಳೆ ಬೀಳುತ್ತಿದೆ. ಆದರೆ ಕಾಂಪೌಂಡ್ ಗೋಡೆ ಕುಸಿಯುವಷ್ಟು ದೊಡ್ಡ ಮಳೆಯಾಗಿಲ್ಲ. 2014ರ ನಂತರ ಈ ಕಾಂಪೌಂಡ್ ನಿರ್ವಿುಸಲಾಗಿದೆ. ಕೇವಲ ಐದು ವರ್ಷಗಳಲ್ಲಿ ಕುಸಿದು ಬೀಳುವಷ್ಟು ಕಾಂಪೌಂಡ್ ಕಾಮಗಾರಿ ಕಳಪೆಯಾಗಿದೆಯಾ ಎನ್ನುವ ಅನುಮಾನ ಎದುರಾಗಿದೆ. ಉತ್ತಮ ಗುಣಮಟ್ಟದ ಕಾಂಪೌಂಡ್ ಆಗಿದ್ದರೆ ಕನಿಷ್ಠ 10 ವರ್ಷ ಗಟ್ಟಿಯಾಗಿರುತ್ತದೆ. ಕಾಂಪೌಂಡ್ ಗೋಡೆಗೆ ಸಮರ್ಪಕ ಅಡಿಪಾಯ ನಿರ್ಮಾಣ ಮಾಡಿಲ್ಲ. ನೇರವಾಗಿ ಗೋಡೆ ನಿರ್ವಿುಸಲಾಗಿದೆ. ಹೀಗಾಗಿ ಗೋಡೆ ಕುಸಿದಿದೆ ಹಾಗೂ ಕಳಪೆ ಗುಣ್ಣಮಟ್ಟ ಎನ್ನುವ ಆರೋಪ ಕೇಳಿಬರುತ್ತಿದೆ.
ವಿಮಾನಗಳು ಟೇಕ್ ಆಫ್, ಲ್ಯಾಂಡಿಂಗ್ ಆಗುವ ವೇಳೆ ರನ್ ವೇನಲ್ಲಿ ಯಾವುದಾದರೂ ಪ್ರಾಣಿ ಬಂದರೆ ಅವಘಡ ಸಂಭವಿಸುತ್ತದೆ. ಹೀಗಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಸಂಭವನೀಯ ಅನಾಹುತ ತಪ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.