ಹುಬ್ಬಳ್ಳಿ:ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನ ಗಣನೆ ಆರಂಭವಾಗಿದೆ. ಇತ್ತ ಹುಬ್ಬಳ್ಳಿಯಲ್ಲಿ ಪ್ರತಿ ಮನೆ ಮನೆಗಳಲ್ಲಿ ದೀಪ ಬೆಳಗಿಸಲು ದೀಪ ತಯಾರಿಕೆಯ ಕಾರ್ಯ ಭರ್ಜರಿಯಾಗಿ ನಡೆದಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರತಿದಿನ ಕಾರ್ತಕ್ರಮಗಳು ಜರುಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಾಮಮಂದಿರ ಉದ್ಘಾಟನೆಯನ್ನು ದೇಶದ ಪ್ರತಿಯೊಬ್ಬರು ದೀಪಾವಳಿ ಹಬ್ಬದಂತೆ ಆಚರಿಸಲು ಕರೆ ಕೊಟ್ಟಿದ್ದು, ಅಂದು ಪ್ರತಿ ಮನೆಯಲ್ಲಿ ದೀಪಗಳನ್ನು ಹಚ್ಚಲು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಟ್ರಸ್ಟ್ನ ಗೋ ಸೇವಾ ಕೇಂದ್ರ ಸಗಣಿಯಿಂದ ಹಣತೆ ತಯಾರಿಸುವಲ್ಲಿ ನಿರತವಾಗಿದೆ. ಇಲ್ಲಿನ ಆನಂದ ನಗರದಲ್ಲಿನ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಟ್ರಸ್ಟ್ನ ಗೋ ಸೇವಾ ಕೇಂದ್ರದಲ್ಲಿ ಜ.22 ರಂದು ಪ್ರತಿ ಮನೆಯಲ್ಲಿ ಹಣತೆ ಹಚ್ಚಲು ಕಳೆದ ಎರಡು ವಾರದಿಂದ ಸಗಣಿಯ ಹಣತೆ ತಯಾರಿಸಲಾಗುತ್ತಿದೆ.
ಹಿಂದೂ ಧರ್ಮದಲ್ಲಿ ಗೋ ಮೂತ್ರ, ಸಗಣಿಗೆ ಪವಿತ್ರವಾದ ಸ್ಥಾನವಿದ್ದು, ಸಾರ್ವಜನಿಕರು ಸಗಣಿಯಿಂದ ತಯಾರಿಸಿದ ಹಣತೆ ಬೆಳಗಿಸುವ ಮೂಲಕ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯನ್ನು ವಿಭಿನ್ನವಾಗಿ ಆಚರಿಸಲಿ ಹಾಗೂ ಗೋ ಮಾತೆಯ ಮಹತ್ವ ಅರಿಯಲಿ ಎಂಬ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದು, 108 ಹಣತೆಗಳನ್ನು ಅಯೋಧ್ಯೆಗೆ ಕಳುಹಿಸುವ ಯೋಜನೆ ಕೂಡ ಹಮ್ಮಿಕೊಂಡಿದೆ.