ಹುಬ್ಬಳ್ಳಿ: ಪಂಜಾಬ್ ಮತ್ತು ಗುಜರಾತ್ ತಂಡಗಳ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಗಳಲ್ಲಿ ಆಡಲು ಹುಬ್ಬಳ್ಳಿಯ ಪ್ರತಿಭೆ ರೋಹಿತ್ ಕುಮಾರ್ ಅವರಿಗೆ ಅವಕಾಶ ಸಿಕ್ಕಿದೆ. ಮಯಾಂಕ್ ಅಗರ್‌ವಾಲ್ ನಾಯಕತ್ವದ 16 ಸದಸ್ಯರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ. ಇದರಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ನ ಎಡಗೈ ಸ್ಪಿನ್ನರ್ ರೋಹಿತ್ ಕುಮಾರ್ ಎ.ಸಿ. ಸ್ಥಾನ ಪಡೆದುಕೊಂಡಿದ್ದಾರೆ.
ಜನವರಿ 5ರಿಂದ 8ರವರೆಗೆ ಹುಬ್ಬಳ್ಳಿಯಲ್ಲಿ ಪಂದ್ಯಗಳು ನಡೆಯಲಿವೆ. ಜ.12ರಿಂದ 15ರವರೆಗೆ ಗುಜರಾತ್‌ನಲ್ಲಿ ಗುಜರಾತ್ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳಿಗೆ ಈ ತಂಡವನ್ನು ಪ್ರಕಟಿಸಲಾಗಿದೆ. ಎರಡೂ ಪಂದ್ಯಾವಳಿಗಳಿಗೆ ಪಿ.ವಿ.ಶಶಿಕಾಂತ್ ತಂಡದ ಕೋಚ್ ಆಗಿರಲಿದ್ದಾರೆ.
ಹಲವು ವರ್ಷಗಳ ನಂತರ ಹುಬ್ಬಳ್ಳಿಯ ಆಟಗಾರನೊಬ್ಬನಿಗೆ ಅವಕಾಶ ದೊರೆತಿದೆ. ಮನೀಷ್ ಪಾಂಡೆ, ಸಮರ್ಥ ಆರ್., ದೇವದತ್ತ ಪಡಿಕ್ಕಲ್, ಶುಭಾಂಗ ಹೆಗಡೆ ಮೊದಲಾದ ಅನುಭವಿಗಳಿರುವ ತಂಡದಲ್ಲಿ ಅವಕಾಶ ಸಿಕ್ಕಿರುವುದು ವಿಶೇಷ.