ಹುಬ್ಬಳ್ಳಿ: ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರದ ಚೊಚ್ಚಲ ಬಜೆಟ್ ಶುಕ್ರವಾರ ಮಂಡನೆಯಾಗಲಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಧಾರವಾಡ ಜಿಲ್ಲೆ ಹಾಗೂ ಅವಳಿ ನಗರದ ಅಭಿವೃದ್ಧಿಗೆ ಯಾವ ಕೊಡುಗೆಗಳು ಸಿಗಲಿವೆ. ಹೆಚ್ಚಿನ ಅನುದಾನ ಸಿಗುವುದೇ ಎಂಬ ನಿರೀಕ್ಷೆಗಳು ಗರಿಗೆದರಿವೆ.
ರಾಜಧಾನಿ ಬೆಂಗಳೂರು ಬಿಟ್ಟರೆ ಅತೀ ವೇಗವಾಗಿ ಬೆಳೆಯುತ್ತಿರುವ ಹಾಗೂ ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಗಳಿಸಿರುವ ನಗರಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಅವಶ್ಯಕತೆ ಇದೆ. ಇದರ ಜೊತೆಗೆ ಮಹಾನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆ ಆಗಿಲ್ಲ. ಹೀಗಾಗಿ ನೂತನ ಕೈಗಾರಿಕೆ ಸ್ಥಾಪನೆ ಮಾಡುವ ಮೂಲಕ ನಿರುದ್ಯೋಗ ನಿರ್ಮೂಲನೆಗೆ ಒತ್ತು ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.
ನಾಲ್ಕು ಟ್ರಕ್ ಟರ್ಮಿನಲ್ ಸ್ಥಾಪಿಸಬೇಕು :ಇನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಇನ್ಪೋಸಿಸ್ ಕಂಪನಿ ಬೃಹತ್ ಕಟ್ಟಡ ಕಟ್ಟಿದೆ. ಆದರೆ ಕಾರ್ಯಾರಂಭ ಮಾಡಲು ಸರ್ಕಾರ ಮಾತುಕತೆ ನಡೆಸಬೇಕು. ನಗರದ ಪ್ರಮುಖ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಟ್ರಕ್ ಟರ್ಮಿನಲ್ ಮಾಡಬೇಕಿದೆ. ಕೇವಲ ಗಬ್ಬೂರು ಟ್ರಕ್ ಟರ್ಮಿನಲ್ ಜೊತೆಗೆ ನಗರದ ಪ್ರಮುಖ ನಗರ ಪ್ರವೇಶಿಸುವ ಕಡೆ ನಾಲ್ಕು ಟ್ರಕ್ ಟರ್ಮಿನಲ್ ಸ್ಥಾಪಿಸಬೇಕು ಎಂಬ ಒತ್ತಾಯವಿದ್ದು, ಈ ಬಜೆಟ್ನಲ್ಲಿ ಅದಕ್ಕೆ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ:6ನೇ ಗ್ಯಾರಂಟಿ ಯೋಜನೆ ಈ ಬಜೆಟ್ನಲ್ಲೇ ಅನುಷ್ಠಾನಕ್ಕೆ ತನ್ನಿ: ಬೆಳಗಾವಿ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ