ಹುಬ್ಬಳ್ಳಿ: ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾದ ಬೆನ್ನಲ್ಲೇ ಸ್ಥಳೀಯ ಆಡಳಿತಕ್ಕೂ ಬಜೆಟ್ಗೆ ಕಾಲ ಕೂಡಿ ಬಂದಿದೆ. ಅವಳಿ ನಗರದ ಜನರ ನಿರೀಕ್ಷೆಯ ಬಜೆಟ್ಗೆ ದಿನಗಣನೆ ಆರಂಭವಾಗಿದೆ.
ಹು-ಧಾ ಮಹಾನಗರ ಪಾಲಿಕೆಯು 2022-23ನೇ ಸಾಲಿನ ಹಣಕಾಸು ವರ್ಷಕ್ಕೆ 919 ಕೋಟಿ ರೂ. ಬಜೆಟ್ ತಯಾರಿಸಿದ್ದು, 36.73 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 85 ಕೋಟಿ ರೂ. ಹೆಚ್ಚಳವಾಗಿದೆ.
ಪ್ರಸಕ್ತ ವರ್ಷ ಸ್ಟಾಲೇಜ್, ಆಸ್ತಿಕರ, ಲೀಗ್ ಲ್ಯಾಂಡ್, ಘನತ್ಯಾಜ್ಯ ಸೆಸ್, ರೋಡ್ ಕಟಿಂಗ್ ಚಾರ್ಜ್, ಸ್ಟ್ಯಾಂಪ್ ಜಾಹೀರಾತು ಸೇರಿದಂತೆ ವಿವಿಧ ಮೂಲಗಳಿಂದ 381 ಕೋಟಿ ರೂ. ಆದಾಯ ನಿರೀಕ್ಷಿಸಿರುವ ಪಾಲಿಕೆಯು ಪೌರಕಾರ್ಮಿಕರ ವೇತನ, ಕರೆಂಟ್ ಬಿಲ್, ರಸ್ತೆ ರಿಪೇರಿ, ಘನತ್ಯಾಜ್ಯ ನಿರ್ವಹಣೆ ಒಳಗೊಂಡು ವಿವಿಧ ಕಾರ್ಯಗಳಿಗೆ 371 ಕೋಟಿ ರೂ. ಖರ್ಚು ಮಾಡುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ 150 ಕೋಟಿ ರೂ. ಬಾಕಿ ಬರಬೇಕಿದೆ. ಸರ್ಕಾರದ ಮೂಲಗಳಿಂದ 15ನೇ ಹಣಕಾಸು ಯೋಜನೆಯಡಿ 52 ಕೋಟಿ ರೂ. ಅದರಂತೆ 5 ವರ್ಷ ಯೋಜನೆಯ ಮಹಾತ್ಮ ಗಾಂಧಿನಗರ ವಿಕಾಸ ಯೋಜನೆಯಡಿ 82 ಕೋಟಿ ರೂ. ನಿರೀಕ್ಷಿಸಲಾಗಿದೆ. ಹಾಗೆಯೇ, ವಿದ್ಯುತ್ ಬಿಲ್ ಹಾಗೂ ನಿರ್ವಹಣೆಗೆ ಎಸ್‌ಎಫ್‌ಸಿ ಅನುದಾನದ ಅಡಿ 85 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ.