ಹುಬ್ಬಳ್ಳಿ:ಕರೆಂಟ್ ಬಿಲ್ ಕೊಡಲು ತೆರಳಿದ್ದ ಹೆಸ್ಕಾಂ ನೌಕರನ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಗರದ ಮಹಾಲಕ್ಷ್ಮಿ ಬಡಾವವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕರೆಂಟ್ ಬಿಲ್ ಜಾಸ್ತಿ ಬಂದಿದೆ ಎಂದು ಆರೋಪಿಸಿ ಇಲ್ಲಿನ ನಿವಾಸಿ ಅಬ್ದುಲ್ ರೆಹಮಾನ್ ಎಂಬಾತ ಹೆಸ್ಕಾಂ ಸಿಬ್ಬಂದಿ ಮಲ್ಲಯ್ಯ ಗಣಾಚಾರಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಮಲ್ಲಯ್ಯ ಅವರ ತಲೆಗೆ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ಅಬ್ದುಲ್ ಕಳೆದ ಮೂರು ತಿಂಗಳ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದ. ಹೀಗಾಗಿ ಈ ತಿಂಗಳ ಬಿಲ್ 5 ಸಾವಿರಕ್ಕಿಂತ ಜಾಸ್ತಿ ಬಂದಿದೆ. ಅಲ್ಲದೇ ಉಚಿತ ವಿದ್ಯುತ್ 200 ಯೂನಿಟ್ಗಿಂತ ಹೆಚ್ಚು ಬಳಸಿರುವ ಹಿನ್ನೆಲೆಯಲ್ಲಿ ಗೃಹ ಜ್ಯೋತಿ ಯೋಜನೆ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಇದರಿಂದ ಕೋಪಗೊಂಡಿದ್ದ ಅಬ್ದುಲ್, ಕರೆಂಟ್ ಬಿಲ್ ನೀಡಲು ಬಂದಿದ್ದ ಹೆಸ್ಕಾಂ ನೌಕರನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ.
ಬಳಿಕ ಸ್ಥಳೀಯರು ನೌಕರ ಮಲ್ಲಯ್ಯನನ್ನು ರಕ್ಷಣೆ ಮಾಡಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಲ್ಲಯ್ಯ ತೀವ್ರವಾಗಿ ಗಾಯಗೊಂಡಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಮಾತನಾಡಿ, "ಕರೆಂಟ್ ಬಿಲ್ ಕೊಡಲು ತೆರಳಿದ್ದ ಹೆಸ್ಕಾಂ ನೌಕರನ ಜೊತೆ ಕರೆಂಟ್ ಬಿಲ್ ಹೆಚ್ಚು ಬಂದಿದೆ ಎಂದು ಜಗಳವಾಡಿ ಹಲ್ಲೆ ಮಾಡಿದ ಆರೋಪಿ ಅಬ್ದುಲ್ ರೆಹಮಾನ್ನನ್ನು ಬಂಧಿಸಿದ್ದೇವೆ" ಎಂದು ತಿಳಿಸಿದರು.