ಹುಬ್ಬಳ್ಳಿ/ಧಾರವಾಡ : ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವುದರಿಂದ ಹುಬ್ಬಳ್ಳಿ ತಾಲೂಕು ಸೇರಿದಂತೆ ಹಲವು ಕಡೆ ಸಾಕಷ್ಟು ಮನೆಗಳು ಧರೆಗುರುಳಿವೆ. ನಗರದಲ್ಲಿ ಈವರೆಗೆ 103 ಮನೆಗಳು ಬಿದ್ದಿದ್ದು, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 114 ಮನೆಗಳು ಧರೆಗುರುಳಿವೆ.
ಸೂರನ್ನೇ ಕಿತ್ತುಕೊಂಡ ವರುಣದೇವ ಇನ್ನು ಕುಂದಗೋಳ ತಾಲೂಕಿನಾದ್ಯಂತ ಒಂದೇ ದಿನಕ್ಕೆ 15 ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಕುಂದಗೋಳ ತಾಲೂಕಿನ ಯರೇಬೂದಿಹಾಳ, ಚಿಕ್ಕನೆರ್ತಿ ಸೇರಿದಂತೆ ಹಲವಾರು ಗ್ರಾಮದಲ್ಲಿ 15 ಕ್ಕೂ ಹೆಚ್ಚು ಮನೆಗಳು ಬಿದ್ದಿವೆ.
ಚಿಕ್ಕನರ್ತಿ ಗ್ರಾಮದಲ್ಲಿ ಮಳೆರಾಯನ ಅಟ್ಟಹಾಸಕ್ಕೆ ಅಲ್ಲಾಸಾಬ್ ನಧಾಪ್, ಸುಭಾಸ್ ಬಾರಕೇರ, ಶಶಿಧರ್ ಮಡಿವಾಳರ, ಕಲ್ಲಪ್ಪ ಮುಸುಂಡಿ, ಶೇಖಪ್ಪ ಪಾಟೀಲ್, ರಮೇಶ್ ಸಂಗಟ್ಟಿ ಎಂಬುವರ ಮನೆಗಳು ನೆಲಕಚ್ಚಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಗಿರೀಶ್ ಕರಡಿ ಎಂಬುವರಿಗೆ ಸೇರಿದ 2 ಹಸುಗಳು ಕೂಡ ಅಸುನೀಗಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಇನ್ನು ಮಾಳಿಗೆ ಮನೆ ಹೊಂದಿದ ಕುಟುಂಬಸ್ಥರು ಅಡುಗೆ ಮಾಡಲಾಗದೇ ರಾತ್ರಿಯಿಡೀ ಮಲಗಲಾರದ ಸ್ಥಿತಿ ಎದುರಿಸುತ್ತಿದ್ದಾರೆ. ಮಳೆ ಪರಿಣಾಮ ಕುಂದಗೋಳ ಹೋಬಳಿಯಲ್ಲಿ 45, ಸಂಶಿ ಹೋಬಳಿಯಲ್ಲಿ 38 ಮನೆ ಕುಸಿದಿವೆ. ಮಳೆಯಿಂದ ವಾಣಿಜ್ಯ ನಗರಿಯ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ನಾಗರಿಕರು ಪರದಾಡುವಂತಾಗಿದೆ.
ಮಾನಸಿಕ ಅಸ್ವಸ್ಥೆಯನ್ನು ರಕ್ಷಿಸಿದ ಸಾಂತ್ವನ ಕೇಂದ್ರ
ಹುಬ್ಬಳ್ಳಿಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅರೆನಗ್ನಾವಸ್ಥೆಯಲ್ಲಿದ್ದ ಮಹಿಳೆವೋರ್ವಳನ್ನು ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಸುನಿತಾ ಎಂಬ ಮಾನಸಿಕ ಅಸ್ವಸ್ಥ ಮಹಿಳೆ ಅರೆನಗ್ನಾವಸ್ಥೆಯಲ್ಲಿ ಮಳೆಯಲ್ಲಿ ಓಡಾಡುತ್ತಿದ್ದಳು. ಈ ಬಗ್ಗೆ ಸ್ಥಳೀಯರು ನಿರಾಶ್ರಿತ ಕೇಂದ್ರಕ್ಕೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ರಾಯಾಪುರ ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದ್ದಾರೆ.