ಹುಬ್ಬಳ್ಳಿ: ಲಾಕ್ಡೌನ್ ಪ್ರಾರಂಭವಾದಾಗಿನಿಂದ ಉದ್ಯಮದ ಎಲ್ಲಾ ಸ್ತರಗಳಿಗೂ ಒಂದಿಲ್ಲೊಂದು ರೀತಿಯ ಸಮಸ್ಯೆ ಉಲ್ಭಣಗೊಂಡು ವಿವಿಧ ರೀತಿಯಲ್ಲಿ ಕಾಡಿದ್ದಂತೂ ಸುಳ್ಳಲ್ಲಾ. ಅದಕ್ಕೆ ಹೋಟೆಲ್ ಉದ್ಯಮವೂ ಹೊರತಾಗಿಲ್ಲ. ರಾಜ್ಯದಲ್ಲಿ ಹೋಟೆಲ್ ಉದ್ಯಮವೂ ಕೂಡಾ ಬಳಲಿ ಬೆಂಡಾಗಿದೆ.
ಇದೀಗ ಸರ್ಕಾರ ಅಗತ್ಯ ಪೂರ್ವಾಪರ ತಯಾರಿಯೊಂದಿಗೆ ಕೆಲವೊಂದು ನಿಯಮವನ್ನು ಪಾಲಿಸಿ ಅಂಗಡಿಯನ್ನ ತೆರೆಯುವಂತೆ ಅನುಮತಿಯನ್ನೇನೋ ನೀಡಿದೆ. ಆದ್ರೆ ಎಲ್ಲಾ ನಿಯಮವನ್ನು ಚಾಚೂ ತಪ್ಪದೆ ಪಾಲಿಸಿ ಗ್ರಾಹಕರಿಗಾಗಿ ಕಾದಿದ್ದ ಹೋಟೆಲ್ ಮಾಲೀಕರು ಅಕ್ಷರಶಃ ಬೇಸರದಲ್ಲಿದ್ದಾರೆ. ಹಾಗಾದ್ರೆ ಇದಕ್ಕೆಲ್ಲಾ ಕಾರಣವೇನು ಅಂತೀರಾ?...
ಕೋಟ್ಯಂತರ ರೂ. ವಹಿವಾಟು ನಷ್ಟ: ಜಿಲ್ಲೆಯಲ್ಲಿ ನೂರಾರು ದೊಡ್ಡ ಹೋಟೆಲ್ಗಳಂತೆ ಸಣ್ಣ ಸಣ್ಣ ಗೂಡಂಗಡಿಗಳು, ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಸೇರಿ ಸಾವಿರಾರು ಹೋಟೆಲ್ಗಳಿವೆ. ಇವೆಲ್ಲವುಗಳಿಂದ ಪ್ರತಿದಿನವೂ ಕೋಟ್ಯಂತರ ರೂ. ಗಳ ವಹಿವಾಟು ನಡೆಯುತ್ತಿತ್ತು. ಆದ್ರೀಗ ಸರ್ಕಾರದ ಅನುಮತಿಯ ಹೊರತಾಗಿಯೂ ಗ್ರಾಹಕರು ಹೋಟೆಲ್ಗಳತ್ತ ಸುಳಿಯದೇ ವ್ಯಾಪಾರ ಸಂಪೂರ್ಣ ಇಳಿಮುಖವಾಗಿದೆ.
ಹೋಟೆಲ್ ಉದ್ಯಮಕ್ಕೆ ಭಾರೀ ನಷ್ಟ ಸಾರ್ವಜನಿಕರಲ್ಲಿ ಬೇರೂರಿರುವ ಭಯ: ದೇಶಾದ್ಯಂತ ದಿನೇ ದಿನೇ ಕೊರೊನಾ ತನ್ನ ಅಟ್ಟಹಾಸವನ್ನು ಹೆಚ್ಚಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸುತ್ತಿರುವ ಗ್ರಾಹಕರು ಮನೆಯಿಂದ ಹೊರ ಬರಲು ಮುಂದಾಗುತ್ತಿಲ್ಲ. ಒಂದು ವೇಳೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಂದಾದರೂ ಕೂಡಾ ನಗರದಲ್ಲಿನ ಹೋಟೆಲ್ಗಳಲ್ಲಿ ತಿಂಡಿ ತಿನಿಸುಗಳನ್ನು ತಿನ್ನಲು ಸಂಪೂರ್ಣ ಭಯಬೀಳುತ್ತಿದ್ದಾರೆ.
ವ್ಯಾಪಾರದಲ್ಲಿ ಕೊಂಚ ಏರಿಕೆ:ಇತ್ತೀಚಿಗೆ ಆಶಾ ಕಾರ್ಯಕರ್ತೆಯರು ಕೊರೊನಾದ ಕುರಿತು ಸಕ್ರೀಯರಾಗಿದ್ದು, ಇದರ ಬಗ್ಗೆ ಪ್ರತಿ ಗ್ರಾಮೀಣ ಮಟ್ಟದಲ್ಲೂ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪರಿಣಾಮ ಒಂದಷ್ಟು ಜನ ನಿಯಮಗಳನ್ನ ಪಾಲಿಸಿ ಹೋಟೆಲ್ನತ್ತ ಮುಖಮಾಡುತ್ತಿರುವುದರಿಂದಾಗಿ ವ್ಯಾಪಾರ ಕೊಂಚ ಚೇತರಿಕೆ ಕಾಣುತ್ತಿದೆ. ಹೀಗಾಗಿ ಇದೀಗ ಹೋಟೆಲ್ ಮಾಲೀಕರ ಮುಖದಲ್ಲಿ ಅಲ್ಪ ಮಂದಹಾಸ ಮೂಡಿದೆ.
ಗ್ರಾಹಕರಿಂದ ಉತ್ತಮ ಸ್ಪಂದನೆ: ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಪ್ರತಿ ಹೋಟೆಲ್ನಲ್ಲೂ ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರಕ್ಕೆ ಪ್ರತಿ ಟೇಬಲ್ನಲ್ಲೂ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಹೊಟೇಲ್ಗೆ ಬರುವ ಗ್ರಾಹಕರಿಗೆ ಪ್ರವೇಶಕ್ಕೆ ಮುನ್ನ ಕೈಗೆ ಸ್ಯಾನಿಟೈಸರ್ ಹಾಕುವುದು ಸೇರಿದಂತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದೆಲ್ಲದ್ದಕ್ಕೂ ಗ್ರಾಹಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.
ಒಟ್ಟಾರೆಯಾಗಿ ಲಾಕ್ಡೌನ್ ಸಂಕಷ್ಟಕ್ಕೆ ತತ್ತರಿಸಿ ಹೋಗಿರುವ ಹೋಟೆಲ್ ವ್ಯಾಪಾರಿಗಳು ಇವತ್ತು ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಎಲ್ಲಾ ರೀತಿಯ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದಾರೆ. ಆದ್ರೂ ಎಲ್ಲೋ ಒಂದೆಡೆ ಭಯ ತುಂಬಿರುವ ಕಣ್ಗಳಲ್ಲಿರುವ ಗ್ರಾಹಕರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಎಲ್ಲಿಯವರೆಗೆ ಗ್ರಾಹಕರು ಧೈರ್ಯದಿಂದ ಹೋಟೆಲ್ನತ್ತ ಬರಲು ಮನಸ್ಸು ಮಾಡುವುದಿಲ್ಲವೋ, ಅಲ್ಲಿಯವರೆಗೆ ಈ ಉದ್ಯಮವನ್ನೇ ನಂಬಿ ಜೀವಿಸುತ್ತಿರುವ ಮಾಲೀಕರು ತಮ್ಮ ಜೀವವನ್ನ ಕೈಯಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುವುದಂತೂ ಸುಳ್ಳಲ್ಲಾ.