ಹುಬ್ಬಳ್ಳಿ: ಹಾವೇರಿಯ ಹೊಸರಿತ್ತಿ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್‌ಡೆತ್ ಆರೋಪ ಪ್ರಕರಣದಲ್ಲಿ ನ್ಯಾಯ ಬೇಕು ಎಂದು ಮೃತನ ಸಹೋದರಿ ಐಜಿಯವರಿಗೆ ದೂರು ನೀಡಲು ಮುಂದಾಗಿದ್ದಾರೆ. ಮೃತ ಗೋವಿಂದ ಪೂಜಾರ ಎಂಬುದು ತಿಳಿದು ಬಂದಿದೆ. ಹುಬ್ಬಳ್ಳಿಯಲ್ಲಿಂದು ಈ ಬಗ್ಗೆ ಮೃತ ಗೋವಿಂದ ಪೂಜಾರ ಸಹೋದರಿ ಗೀತಾ ಪೂಜಾರಿ ಮಾತನಾಡಿ, ನಮ್ಮ ಸಹೋದರನನ್ನು ಪೊಲೀಸರು ಕಳ್ಳತನ ಪ್ರಕರಣದಲ್ಲಿ ಕರೆದುಕೊಂಡು ಹೋಗಿ ವಿಚಾರಣೆ ನೆಪದಲ್ಲಿ ಮನಬಂದಂತೆ ಥಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ಆತ ಮೃತಪಟ್ಟಿದ್ದು, ಪಿಡ್ಸ್ ಬಂದು ಸಾವನ್ನಪ್ಪಿದ್ದಾನೆ ಎಂದು ಹೊಸರತ್ತಿ ಪೊಲೀಸರು ಕಥೆ ಕಟ್ಟಿದ್ದಾರೆ. ನನ್ನ ಸಹೋದರನ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಮೃತನ ಮಾವ ಶರಣಪ್ಪ ಕೂಡ ಪೊಲೀಸ್ ಹಲ್ಲೆಯಿಂದ ನಮ್ಮ ಅಳಿಯ ಸಾವನ್ನಪ್ಪಿದ್ದಾನೆ. ಕಳ್ಳತನ ಪ್ರಕರಣ ಅಂತ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಬಳಿಕ ಹಾವೇರಿ, ಗುತ್ತಲ ಆಸ್ಪತ್ರೆಯಲ್ಲಿ ತಮಗೆ ಹೇಗೆಬೇಕೋ ಹಾಗೇ ದಾಖಲೆ ಸೃಷ್ಟಿಸಿ ಪ್ರಕರಣ ತಿರುಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದು, ನ್ಯಾಯಕ್ಕಾಗಿ ಐಜಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್ 6ರಂದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಣೂರು ತಾಲೂಕಿನ ಇಚ್ಚಂಗಿಯಲ್ಲಿ ಗೋವಿಂದಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೊಸರಿತ್ತಿ ಹೊರ ಠಾಣೆಯಲ್ಲಿ ಗೋವಿಂದಪ್ಪ ಲಾಕಪ್ನಲ್ಲೇ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.