ಹುಬ್ಬಳ್ಳಿ:"ರಾಜ್ಯದಲ್ಲಿ ಡ್ರಗ್ಸ್ ತಡೆಗೆ ನಾವು ತೀರ್ಮಾನ ಮಾಡಿದ್ದೇವೆ. ಈ ಕುರಿತು ಕಟ್ಟುನಿಟ್ಟಿನ ಸೂಚನೆಯನ್ನು ನಮ್ಮ ಅಧಿಕಾರಿಗಳಿಗೆ ಕೊಟ್ಟಿದ್ದೇನೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿಂದು ಪೊಲೀಸ್ ಕಮಿಷನರೇಟ್ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗೋವಾ, ಒಡಿಶಾದಿಂದ ಡ್ರಗ್ಸ್ ಬರಬಹುದು. ಹುಬ್ಬಳ್ಳಿಯ ಜನರಿಗೆ ಇದರಿಂದ ಅನಾಹುತ ಆಗುವುದು ಬೇಡ ಎಂದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ" ಎಂದರು.
"ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಮಾಡಿದ್ದೇನೆ. ಇಲಾಖೆ ಸಮರ್ಥವಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಮೂಲಕ ಸರ್ಕಾರ, ಜನಸಮುದಾಯಕ್ಕೆ ವಿಶ್ವಾಸ ಮೂಡಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಮಸ್ಯೆಯಿದೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸರ್ಕಾರದ ನೀತಿ ನಿಯಮಗಳ ಬಗ್ಗೆ ಸಹ ಇಲಾಖೆ ಎಚ್ಚರಿಕೆ, ಸೂಚನೆ, ಮಾರ್ಗದರ್ಶನ ನೀಡಿ ಜನರ ಸಮಸ್ಯೆ ಬಗೆಹರಿಸಬೇಕು" ಎಂದು ಹೇಳಿದರು.
"ಹುಬ್ಬಳ್ಳಿಯಲ್ಲಿ ಅಪರಾಧಗಳ ಸಂಖ್ಯೆ ಬೇರೆ ಜಿಲ್ಲೆಗಳಿಗಿಂತ ಭಿನ್ನವಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ ಶಾಂತಿಯಿಂದ ಇದೆ. ಎಲ್ಲಾ ಜಿಲ್ಲೆಗಳಲ್ಲಿ ಇರುವ ಹಾಗೆ ಕ್ರೈಮ್ ರೇಟ್ ಇದೆ. ಆದರೆ ಅವೆಲ್ಲವೂ ನಿಯಂತ್ರದಲ್ಲಿದೆ. ಜ್ವಲಂತ ಸಮಸ್ಯೆಗಳು ಮೊದಲಿನಂತೆ ಇಲ್ಲ ಎನ್ನುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಶೋಷಿತರು, ಬಡವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಭೆ ನಡೆಸಿ ನ್ಯಾಯ ಒದಗಿಸಲು ಹೇಳಿದ್ದೇನೆ. ಪ್ರತಿ ತಿಂಗಳು ಎಸ್ಸಿ, ಎಸ್ಟಿ ಸಭೆ ಮಾಡಿ, ಅವರ ಅಹವಾಲುಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಠಾಣೆಯಲ್ಲಿ ಪ್ರತಿ ತಿಂಗಳು ಸಭೆ ನಡೆಸಬೇಕು. ಕಮಿಷನರೇಟ್ ನಲ್ಲಿಯೂ ಸಭೆ ಬಗ್ಗೆ ದಾಖಲೆ ಇಡಲು ಹೇಳಿದ್ದೇನೆ" ಎಂದು ತಿಳಿಸಿದರು.