ಹುಬ್ಬಳ್ಳಿ :ಕೇಂದ್ರ ಸರ್ಕಾರದ ಹುಸಿ ಭರವಸೆಗಳು ಜನಸಾಮಾನ್ಯರಲ್ಲಿ ಬೇಸರ ತರಿಸಿದೆ. ಜನರಲ್ಲಿ ಸರ್ಕಾರದ ಬಗ್ಗೆ ಇರುವ ಆಶಾ ಭಾವನೆ ಹೋಗಿದೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಜನತೆಯಲ್ಲಿ ಒಲವು ಜಾಸ್ತಿಯಾಗುತ್ತಿದೆ ಎಂದರು. ರಾಜ್ಯದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಸಾವಿರಾರು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಿರಾಶ್ರಿತ ಕೇಂದ್ರಗಳಲ್ಲಿ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಮಳೆಯಿಂದಾಗಿ 40 ಸಾವಿರ ಕೋಟಿಯಷ್ಟು ಬೆಳೆ ಹಾನಿ ಸಂಭವಿಸಿದೆ. ಕಳೆದ ಬಾರಿಯ ನೆರೆ ಹಾವಳಿಯಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಸರ್ಕಾರ ಇನ್ನೂ ಅನೇಕ ಕುಟುಂಬಗಳಿಗೆ ಸಮರ್ಪಕ ಪರಿಹಾರ ಒದಗಿಸಿಲ್ಲ ಎಂದರು.
ಮುಂಬೈ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರ ಬದುಕು ಅಸ್ತವ್ಯಸ್ತವಾಗಿದೆ. ರೈತರಿಗೆ ಹಾಗೂ ನಿರಾಶ್ರಿತರಿಗೆ ರಾಜ್ಯ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಸಂಕಷ್ಟ ಅನುಭವಿಸುತ್ತಿರುವ ಜನತೆಯ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಶೀಘ್ರವೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಖಚಿತ :
ಅ. 28 ರಂದು ನಡೆಯಲಿರುವ ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಪಶ್ಚಿಮ ಪದವೀಧರರ ಕ್ಷೇತ್ರ ಅತ್ಯಂತ ಪ್ರಜ್ಞಾವಂತರ ಕ್ಷೇತ್ರ. ಕಾಂಗ್ರೆಸ್ ಪಕ್ಷದಿಂದ ಆರ್.ಎಂ ಕುಬೇರಪ್ಪ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನ ಬಗೆಹರಿಸಲು ಅವರು ಯೋಗ್ಯ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಗೆಲುವು ನಿಶ್ಚಿತ. ಕ್ಷೇತ್ರದ ನಾಲ್ಕೂ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಪದವೀಧರರು ಹಾಗೂ ಪ್ರಜ್ಞಾವಂತರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ ಎಂದರು.
ಕೃಷ್ಣಾ ಜಲವಿವಾದದಲ್ಲಿ ಕೇಂದ್ರಕ್ಕೆ ಗಂಡಾಂತರ :
ಕೃಷ್ಣಾ ನದಿ ಜಲ ವಿವಾದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಲಂಗಾಣದ ಬಗ್ಗೆ ತೋರುತ್ತಿರುವ ಮೃದು ಧೋರಣೆ ಸರಿಯಲ್ಲ. ಇದು ಮುಂದುವರೆದರೆ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಬಹುದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಬೇಕು. ಅಂತರ್ ರಾಜ್ಯ ಜಲ ವಿವಾದದ ಕುರಿತು ಸ್ಪಷ್ಟ ನಿಲುವು ಆಗಬೇಕು. ಕೇಂದ್ರ ಸರ್ಕಾರ ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಮತ್ತೆ ಈ ವಿವಾದವನ್ನ ನ್ಯಾಯಾಧೀಕರಣದ ಮೂಲಕ ಬಗೆಹರಿಸಲು ಮುಂದಾಗಬಾರದು ಎಂದರು.