ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರು ಹುಬ್ಬಳ್ಳಿ:1992ರ ಗಲಭೆ ಪ್ರಕರಣದ ಆರೋಪಿಶ್ರೀಕಾಂತ್ ಪೂಜಾರಿಗೆ ಇಂದು ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತು. ಇಬ್ಬರು ಜಾಮೀನುದಾರರು ತಲಾ ಒಂದು ಲಕ್ಷ ರೂ.ಗಳ ಭದ್ರತಾ ಬಾಂಡ್, ಪ್ರತಿ ಮುದ್ದತಿಗೆ ಹಾಜರಾಗಬೇಕು ಮತ್ತು ನ್ಯಾಯಾಲಯ ವ್ಯಾಪ್ತಿ ಮೀರಿ ಹೊರಗೆ ಹೋಗಬಾರದು ಎಂಬ ಷರತ್ತು ವಿಧಿಸಲಾಗಿದೆ.
ಶ್ರೀಕಾಂತ್ ಅವರನ್ನು 31 ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ಪೊಲೀಸರು ಡಿಸೆಂಬರ್ 29ರಂದು ಬಂಧಿಸಿದ್ದರು. ಶ್ರೀಕಾಂತ್ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು.
1992 ಡಿಸೆಂಬರ್ 5ರಂದು ನಡೆದಿದ್ದ ರಾಮ ಜನ್ಮಭೂಮಿ ಹೋರಾಟದ ವೇಳೆ ನಡೆದ ಗಲಭೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು.
ನಾಳೆ ಬಿಡುಗಡೆ ಸಾಧ್ಯತೆ:"ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿರುವುದು ಖುಷಿ ತಂದಿದೆ. ಷರತ್ತುಗಳ ಬಗ್ಗೆ ಜಾಮೀನು ಪ್ರತಿ ಕೈಸೇರಿದ ನಂತರವೇ ಗೊತ್ತಾಗಲಿದೆ. ನಾಳೆ ಸಾಯಂಕಾಲದೊಳಗೆ ಶ್ರೀಕಾಂತ್ ಪೂಜಾರಿಯನ್ನು ಬಿಡುಗಡೆ ಮಾಡುವ ಭರವಸೆ ಇದೆ" ಎಂದು ಎಂದು ಆರೋಪಿ ಪರ ವಕೀಲ ಸಂಜಯ ಬಡಸ್ಕರ್ ಹೇಳಿದರು.
''ಹಿಂದೂ ಸಮಾಜವನ್ನು ಹೆದರಿಸುವ ಉದ್ದೇಶದಿಂದ ಸಾಕಷ್ಟು ಷಡ್ಯಂತ್ರ ಮಾಡಿದವರಿಗೆ ತಕ್ಕ ಉತ್ತರ ಸಿಕ್ಕಿದೆ. ದೇಶವೇ ಹೆಮ್ಮೆಪಡುವ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕೋಮುವಾದ ಹಾಗೂ ಅಶಾಂತಿ ಹುಟ್ಟಿಸುವ ಹುನ್ನಾರ ನಡೆಸಿದವರಿಗೆ ಉತ್ತರ ಸಿಕ್ಕಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರಲು ಮಾಡಿರುವ ಷಡ್ಯಂತ್ರಕ್ಕೆ ತಕ್ಕ ಶಾಸ್ತಿಯಾಗಿದೆ'' ಎಂದು ವಕೀಲ ಹಾಗೂ ವಿಎಚ್ಪಿ ಮುಖಂಡ ಅಶೋಕ ಅಣ್ವೇಕರ ಪ್ರತಿಕ್ರಿಯಿಸಿದರು.
ಕೋರ್ಟ್, ವಕೀಲರಿಗೆ ಧನ್ಯವಾದ ಹೇಳಿದ ಪೂಜಾರಿ ಪುತ್ರ:''ನಮ್ಮ ತಂದೆಗೆ ಜಾಮೀನು ದೊರೆತಿರುವುದು ಖುಷಿ ತಂದಿದೆ. ಕೋರ್ಟ್ಗೆ ಹಾಗೂ ವಕೀಲರಿಗೆ ಧನ್ಯವಾದ ತಿಳಿಸುತ್ತೇನೆ'' ಎಂದು ಶ್ರೀಕಾಂತ್ ಪೂಜಾರಿ ಪುತ್ರ ಮಂಜುನಾಥ ಪೂಜಾರಿ ಹೇಳಿದರು.
ಇದನ್ನೂ ಓದಿ: