ಹುಬ್ಬಳ್ಳಿ:ಐಟಿ, ಇಡಿ ಹಾಗೂ ಸಿಬಿಐಗಳು ಬಿಜೆಪಿಯ ಅಸ್ತ್ರಗಳಾಗಿವೆ. ಇವುಗಳನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರ ಮತ್ತು ಬೆಂಬಲಿಗರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಬಿಜೆಪಿ ವಿರುದ್ಧ ಗುಡುಗಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಐಟಿ, ಇಡಿಗಳು ರಾಜನೀತಿಯ ಅಸ್ತ್ರಗಳಾಗಿವೆ. ಚುನಾವಣೆ ಬಂದಾಗ ಈ ಅಸ್ತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇವಲ ಕಾಂಗ್ರೆಸ್ ಪಕ್ಷವೊಂದೇ ಅಲ್ಲ. ಪ್ರತಿಪಕ್ಷಗಳೇ ಬಿಜೆಪಿಯ ಟಾರ್ಗೆಟ್. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಅಲ್ಲಿ ಈ ರೀತಿಯ ಅಸ್ತ್ರಗಳನ್ನು ಬಳಸುತ್ತಿದೆ. ಪ್ರತಿಪಕ್ಷಗಳನ್ನು ಬಗ್ಗು ಬಡಿಯಲು ಯತ್ನಿಸ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಸರ್ಕಾರವನ್ನು ಬದಲಾಯಿಸಲು ಜನ ಉತ್ಸುಕರಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಕೊಟ್ಟ ಭರವಸೆ ಬಿಜೆಪಿ ಈಡೇರಿಸಿಲ್ಲ. ಹೇಳಿದ್ದನ್ನು ಬಿಜೆಪಿ ಮಾಡಿ ತೋರಿಸಿಲ್ಲ. ಹಿಮಾಚಲ ಪ್ರದೇಶದಲ್ಲಿ ನಾವು 10 ಗ್ಯಾರಂಟಿ ಕೊಟ್ಟಿದ್ದೆವು. ಈ ಪೈಕಿ ದೊಡ್ಡ ಗ್ಯಾರಂಟಿ ಒಪಿಎಸ್ ಜಾರಿಗೆ ತಂದೆವು. ಮೊದಲ ಸಂಪುಟದಲ್ಲಿಯೇ ಜಾರಿಗೆ ತಂದಿದ್ದೇವೆ ಎಂದರು.
ಹಿಮಾಚಲ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಗ್ಯಾರಂಟಿ ತಂದಿದ್ದೇವೆ. ಆದರೆ ಬಿಜೆಪಿ ನಾಯಕರು ಅಪಪ್ರಚಾರ ಮಾಡ್ತಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಭರವಸೆ ಈಡೇರಿಸಿಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಕಳ್ಳತನ ಮಾಡೋ ಆಲೋಚನೆ ಮಾಡದ ರೀತಿಯಲ್ಲಿ ಜನ ಕಾಂಗ್ರೆಸ್ಗೆ ಖಂಡಿತವಾಗಿಯೂ ಬೆಂಬಲ ನೀಡುತ್ತಾರೆ. ಶಾಸಕರನ್ನು ಖರೀದಿಸೋ ಯೋಚನೆ ಮಾಡದ ರೀತಿಯಲ್ಲಿ ಭರ್ಜರಿ ಬಹುಮತ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಬಜರಂಗದಳ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಜರಂಗ ಬಲಿ ನಮ್ಮ ಹೃದಯದಲ್ಲಿದ್ದಾರೆ. ಆದರೆ ನಾವು ಬಜರಂಗ ದಳದ ನಿಷೇಧ ಮಾಡ್ತಿರೋ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದು ತಿಳಿಸಿದರು.