ಬೆಂಗಳೂರು:ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆಗಳನ್ನು ಪೂರ್ಣಗೊಳಿಸದಿದ್ದಲ್ಲಿ, ಸಾರ್ವಜನಿಕ ಸಿಬ್ಬಂದಿಯ ನೆತ್ತಿಯ ಮೇಲೆ ತೂಗುಗತ್ತಿ ಸದಾ ನೇತಾಡುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮೊದಲು ನಿಮ್ಮ ಮನೆಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ ಎಂದು ಲೋಕಾಯುಕ್ತ ಸಂಸ್ಥೆಗೆ ಹೈಕೋರ್ಟ್ ಸೂಚನೆ ನೀಡಿದೆ.
ಅಷ್ಟೇ ಅಲ್ಲದೇ, ವಿಳಂಬದ ಕಾರಣದಿಂದ ಪ್ರಕರಣಗಳಲ್ಲಿ ಸಿಲುಕಿರುವ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ನ್ಯಾಯಪೀಠ ಹೇಳಿದೆ. ಲೋಕಾಯುಕ್ತರು ತಮ್ಮ ವಿರುದ್ಧ ದಾಖಲಿಸಿರುವ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ರದ್ದು ಕೋರಿ ಧಾರವಾಡದ ಕರ್ನಾಟಕ ವಿವಿಯ ನಿವೃತ್ತ ಪ್ರೊಫೆಸರ್ ಕಾಳಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಧಾರವಾಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಾಲಯ ಗರಂ:ಅಲ್ಲದೇ, ಈ ನ್ಯಾಯಾಲಯ ಹಲವು ಪ್ರಕರಣಗಳನ್ನು ಗಮನಿಸಿದೆ, ಅವುಗಳಲ್ಲಿ ತನಿಖೆ ದಶಕಗಳ ಕಾಲ ನಡೆದಿದೆ ಮತ್ತು ಇನ್ನೂ ಅಂತಿಮ ವರದಿಗಳು ಸಲ್ಲಿಕೆಯಾಗಿಲ್ಲ. ವಿಳಂವಾದಂತೆಲ್ಲ ಸಂತ್ರಸ್ತರ ಹಕ್ಕುಗಳು ಮೊಟಕುಗೊಳ್ಳಲಿವೆ ಎಂದು ಪೀಠ ತಿಳಿಸಿದೆ. ಜೊತೆಗೆ, ಲೋಕಾಯುಕ್ತ ಪೊಲೀಸರು, ಪ್ರಾಸಿಕ್ಯೂಷನ್ ವೈಫಲ್ಯಗಳ ಬಗ್ಗೆ ಮಾತನಾಡಿದರೆ, ಅದು ಸಂಪುಟಗಟ್ಟಲೆ ಆಗುತ್ತದೆ ಎಂದೂ ನ್ಯಾಯಾಲಯ ತಿಳಿಸಿದೆ.
ಅರ್ಜಿದಾರರ ವಿರುದ್ಧ ತನಿಖೆ ಪೂರ್ಣಗೊಳಿಸದಿರುವುದಕ್ಕೆ ಒಂದು ಕಾರಣವೆಂದರೆ, ಅರ್ಜಿದಾರರು ತಮ್ಮ ವಿರುದ್ಧದ ಎಲ್ಲ ಬ್ಯಾಂಕ್ ಖಾತೆ ವಿವರಗಳನ್ನು ಬಹಿರಂಗಗೊಳಿಸದಿರುವುದು, ತನಿಖೆ ವೇಳೆ ಕಂಡುಬಂದಿದ್ದ ಒಟ್ಟು 58 ಬ್ಯಾಂಕ್ ಖಾತೆಗಳ ಪೈಕಿ 20 ಖಾತೆಗಳ ವಿವರಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಲೋಕಾಯುಕ್ತ ಪೊಲೀಸರಿಗೆ ಇಚ್ಛಾಶಕ್ತಿ ಇಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ತನಿಖೆಯನ್ನು ತ್ವರಿತವಾಗಿ ಏಕೆ ಪೂರ್ಣಗೊಳಿಸಬೇಕು ಎಂಬುದಕ್ಕೆ ಈ ಪ್ರಕರಣ ಕಣ್ತೆರೆಸಲಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ ಏನು?:ಲೋಕಾಯುಕ್ತ ಪೊಲೀಸರು 2019ರಿಂದ ತಮ್ಮ ವಿರುದ್ಧದ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈವರೆಗೂ ಪೂರ್ಣಗೊಳಿಸಿಲ್ಲ. ಅಂತಿಮ ವರದಿಯನ್ನು ಸಲ್ಲಿಸಿಲ್ಲ. ಹಾಗಾಗಿ ಇಡೀ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಹೈಕೋಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ತಮ್ಮ ವಿರುದ್ಧ ಲೋಕಾಯುಕ್ತ ತನಿಖೆ ಬಾಕಿ ಇರುವ ಕಾರಣ ತಾವು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಎಲ್ಲ ಅರ್ಹತೆ ಇದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಅರ್ಜಿ ಸಲ್ಲಿಕೆ ಮಾಡಿದವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಮಾನವ ವನ್ಯಜೀವಿ ಸಂಘರ್ಷ: ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ.. ಕಾಡುಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ಸೂಚನೆ