ಹುಬ್ಬಳ್ಳಿ : ಚೆನ್ನಮ್ಮ ಸರ್ಕಲ್ ಮೇಲ್ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಹೈಕೋರ್ಟ್ಗೆ 87 ಮಂದಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಇದನ್ನು ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಮೇಲ್ಸೇತುವೆ ಎಲ್ಲಿರಬೇಕು?, ಹೇಗಿರಬೇಕೆಂದು ಕೋರ್ಟ್ ನಿರ್ಧರಿಸಲು ಸಾಧ್ಯವಿಲ್ಲವೆಂದು ತಿಳಿಸಿ, ಕಾಮಗಾರಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಮೇಲ್ಸೇತುವೆ ಯೋಜನೆ ಪ್ರಶ್ನಿಸಿ 87 ನಿವಾಸಿಗಳು ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಸಿಜೆ ಪ್ರಸನ್ನ ಬಿ.ವರಾಳೆ, ನ್ಯಾ. ಕೃಷ್ಣದೀಕ್ಷಿತ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು, ಸಂಚಾರ ದಟ್ಟಣೆ ನಿವಾರಿಸುವ ಉದ್ದೇಶದ ಯೋಜನೆ ಇದಾಗಿದೆ, ಮೇಲ್ಸೇತುವೆ ಎಲ್ಲಿರಬೇಕು?, ಹೇಗಿರಬೇಕೆಂದು ಕೋರ್ಟ್ ನಿರ್ಧರಿಸಲು ಸಾಧ್ಯವಿಲ್ಲ. 196 ಕೋಟಿ ವೆಚ್ಚದ ಯೋಜನೆಯಲ್ಲಿ ಅರ್ಧದಷ್ಟು ವೆಚ್ಚವಾಗಿದೆ. ತಜ್ಞರು ಫ್ಲೈಓವರ್ ಯೋಜನೆಯ ರೂಪರೇಷೆ ಸಿದ್ಧಪಡಿಸಿದ್ದಾರೆ ಎಂದು ಹೇಳಿ ಕಾಮಗಾರಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.
ಇದನ್ನೂ ಓದಿ :ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಡಿ. ಕೆ. ಶಿವಕುಮಾರ್ ಮಹತ್ವದ ಸಭೆ : ಫ್ಲೈಓವರ್, ಸುರಂಗ ಮಾರ್ಗ ನಿರ್ಮಾಣಕ್ಕೆ ಚಿಂತನೆ
ಸಾರ್ವಜನಿಕರ ವಿರೋಧದ ನಡುವೆಯೂ ಚೆನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ತಜ್ಞರ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಸಮಗ್ರ ಅಧ್ಯಯನ ನಡೆಸಿದ ನಂತರ ಸಮಿತಿಯು ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದೆ. ಅದಾಗ್ಯೂ, ಕೆಲವೊಂದು ಬದಲಾವಣೆಗಳೊಂದಿಗೆ ಫ್ಲೈಓವರ್ ನಿರ್ಮಾಣಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಚೆನ್ನಮ್ಮ ವೃತ್ತಕ್ಕೆ ಸಂಪರ್ಕಿಸುವ ಏಳು ರಸ್ತೆಗಳಲ್ಲಿ ನಾಲ್ಕು ರಸ್ತೆಗಳ ಮೇಲೆ ಈಗಾಗಲೇ ಒತ್ತಡ ಹೆಚ್ಚಿದೆ. ದಿನೇ ದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಪರ್ಯಾಯ ರಸ್ತೆಗಳನ್ನು ನಿರ್ಮಿಸಿದರೆ ಸ್ಥಳೀಯ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಧಕ್ಕೆ ಉಂಟಾಗಲಿದೆ. ಹೀಗಾಗಿ, ಮೇಲ್ಸೇತುವೆ ನಿರ್ಮಾಣವೊಂದೇ ಮುಂದಿನ ದಾರಿ ಎಂದು ಈ ಹಿಂದೆ ಇದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ದರು. ಈಗ ಚೆನ್ನಮ್ಮ ಸರ್ಕಲ್ ಮೇಲ್ಸೇತುವೆ ಪ್ರಶ್ನಿಸಿದ್ದ ಪಿಐಎಲ್ ವಜಾಗೊಂಡಿದ್ದರಿಂದ ಕಾಮಗಾರಿಗೆ ಯಾವುದೇ ಅಡ್ಡಿ ಆತಂಕವಿಲ್ಲದಂತಾಗಿದೆ.