ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲ ಕೆರೆಯಂತಾಗಿದ್ದವು. ನಗರದ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ಹುಬ್ಬಳ್ಳಿಯ ಗಣೇಶನಗರದ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಶಾಲಾ ಮಕ್ಕಳು, ಸಾರ್ವಜನಿಕರು ನೀರಿನಲ್ಲಿಯೇ ಓಡಾಡುವ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಅಲ್ಲದೇ ಪ್ರತಿಬಾರಿ ಮಳೆ ಬಂದಾಗಲೂ ಇಂತಹ ಅವ್ಯವಸ್ಥೆ ಸರ್ವೇ ಸಾಮಾನ್ಯವಾಗಿದೆ.
ಹುಬ್ಬಳ್ಳಿಯ ಚನ್ನಪೇಟೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮಳೆಯ ನೀರನ್ನು ಹೊರ ಹಾಕಲು ಹರ ಸಾಹಸ ಪಡುವಂತಾಗಿದೆ. ಒಳಚರಂಡಿ ಯೋಜನೆಗೆ ಸಂಬಂಧಿಸಿದಂತೆ ಹಲವಾರಿ ಬಾರಿ ಇಲ್ಲಿನ ಜನರು ಮಹಾನಗರ ಪಾಲಿಕೆಗೆ ದೂರು ನೀಡಿದ್ದಾರೆ. ಆದರೂ ಮಳೆ ಬಂದಾಗಲೆಲ್ಲ ಇಂತ ಸಮಸ್ಯೆ ಉದ್ಬವವಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪಾಲಿಕೆಯು ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.
ರೈತರ ಮುಖದಲ್ಲಿ ಮಂದಹಾಸ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಮುಂಗಾರು ಮಳೆ ಕೈಕೊಟ್ಟಿತ್ತು. ಈಗ ಹಿಂಗಾರು ಬಿತ್ತನೆ ಮಾಡಿದ್ದ ರೈತರು ಆಕಾಶದತ್ತ ಮುಖ ಮಾಡಿಕೊಂಡಿದ್ದರು. ಆದರೆ, ಈಗ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಕಡಲೆ, ಜೋಳ, ಗೋಧಿ, ಹತ್ತಿ, ಮೆಣಸಿನಕಾಯಿ, ಈರುಳ್ಳಿ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಮಳೆ ಕೈಕೊಟ್ಟಿದ್ದರಿಂದ ಬೆಳೆದ ಬೆಳಗಳು ಒಣಗಿ ಹೋಗುತ್ತಿದ್ದವು. ಆದರೆ ಅಲ್ಲಲ್ಲಿ ಉಳಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪಂಪಸೆಟ್ಗಳ ಮೊರೆ ಹೋಗಿದ್ದರು. ಇನ್ನು ಕೆಲವರು ನೀರಿನ ಟ್ಯಾಂಕರ್ ಬಳಸಿ ನೀರು ಹರಿಸಿದ್ದರು.