ಹುಬ್ಬಳ್ಳಿ:ಅವಳಿ ನಗರದ ಸಮರ್ಪಕ ಕಸ ವಿಲೇವಾರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ರಾಜ್ಯದ ಎರಡನೆಯ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆಗೆ ಕಸ ವಿಲೇವಾರಿ ಮಾಡೋದೆ ದೊಡ್ಡ ಸವಾಲಿನ ಕೆಲಸವಾಗಿದೆ. ಅವಳಿ ನಗರದ 82 ವಾರ್ಡ್ಗಳಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರದ್ದಾಗಿದೆ. ಕಸದ ವಾಹನ ಪ್ರತಿ ನಿತ್ಯ ತಮ್ಮ ವಾರ್ಡಿಗೆ ಬರುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಪಾಲಿಕೆ ಈಗ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಅವಳಿ ನಗರದ ಪ್ರತಿ ಮನೆಗೆ ರೆಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ಟ್ಯಾಗ್ ಅಳವಡಿಸುವ ಕೆಲಸ ಮಾಡುತ್ತಿದೆ.
ಕಸ ವಿಲೇವಾರಿಗೆ ಹು-ಧಾ ಮಹಾನಗರ ಪಾಲಿಕೆ ಹೊಸ ಪ್ರಯೋಗ ಕಸ ಸಂಗ್ರಹಿಸುವ ವಾಹನದ ಮೇಲೆ ನಿಗಾ ಇಡಲು ಹಾಗೂ ಸಮರ್ಪಕವಾಗಿ ಕಸ ವಿಲೇವಾರಿ ಮಾಡಲು ಈ ಟ್ಯಾಗ್ ಸಹಕಾರಿಯಾಗಿದೆ. ಮನೆಯ ಕಾಂಪೌಂಡ್, ಗೇಟ್ ಅಥವಾ ಕಸ ಸಂಗ್ರಹಿಸಿ ಇಡುವ ಸ್ಥಳದಲ್ಲಿ ಈ ಟ್ಯಾಗ್ ಅಳವಡಿಸಲಾಗುತ್ತದೆ. ನಗರದ 82 ವಾರ್ಡ್ಗಳಲ್ಲಿ ಈ ಟ್ಯಾಗ್ ಅಳವಡಿಕೆ ಆರಂಭವಾಗಿದ್ದು, ಈವರೆಗೆ 23 ವಾರ್ಡ್ಗಳ ಸುಮಾರು 70 ಸಾವಿರ ಮನೆಗಳಿಗೆ ಟ್ಯಾಗ್ ಅಳವಡಿಕೆ ಪೂರ್ಣಗೊಂಡಿದೆ.
ಮನೆ ಮುಂದೆ ಅಳವಡಿಸಿರುವ ಟ್ಯಾಗ್ ಒಳಗೆ ಒಂದು ಸಣ್ಣ ಸಿಮ್ ಅಳವಡಿಸಲಾಗಿದೆ. ಕಸ ಸಂಗ್ರಹ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದು, ಈ ವಾಹನಗಳು ಟ್ಯಾಗ್ ಅಳವಡಿಸಿದ ಮನೆಯ ಮುಂದೆ ಬಂದಾಗ, ಪೌರ ಕಾರ್ಮಿಕರ ಬಳಿ ಇರುವ ರೀಡರ್ ಮೂಲಕ ಕಸ ಸಂಗ್ರಹದ ಮಾಹಿತಿಯನ್ನು ರವಾನಿಸುತ್ತದೆ. ಕಾಟನ್ ಮಾರುಕಟ್ಟೆಯಲ್ಲಿರುವ ಕಂಟ್ರೋಲ್ ರೂಂಗೆ ಕಸ ಸಂಗ್ರಹಿಸಿದ ಬಗ್ಗೆ ಮಾಹಿತಿ ರವಾನಿಸುವ ವ್ಯವಸ್ಥೆ ಮಾಡಲಾಗಿದೆ. ಈ ಟ್ಯಾಗ್ ಅಳವಡಿಕೆಯಿಂದ ಪ್ರತಿ ನಿತ್ಯ ಎಲ್ಲಾ ವಾರ್ಡ್ಗಳಿಗೆ ತೆರಳಿ ಕಸ ಸಂಗ್ರಹ ಮಾಡುವ ವಾಹನಗಳ ಮಾಹಿತಿ ನಿಖರವಾಗಿ ಲಭ್ಯವಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಈ ಟ್ಯಾಗ್ ಅಳವಡಿಕೆ ಕಾರ್ಯ ನಡೆಯುತ್ತಿದೆ.
ಮನೆ ಮನೆಗೆ ಟ್ಯಾಗ್ ಅಳವಡಿಸಿ ಕಸ ವಿಲೇವಾರಿ ಮಾಡುವ ವ್ಯವಸ್ಥೆ ಮೇಲೆ ಪಾಲಿಕೆ ನಿಗಾ ಇಟ್ಟಿದೆ. ಅವಳಿ ನಗರದ ಪ್ರತಿ ಮನೆಗೂ ಟ್ಯಾಗ್ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಪಾಲಿಕೆಯ ವಿನೂತನ ಪ್ರಯೋಗಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.