ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಸಿದ್ದರಾಮಯ್ಯ ಕಾರಣ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ಸರ್ಕಾರದ ಪತನದ ಮಾತನ್ನಾಡಿದ್ದರು. ಬಿಜೆಪಿ ಅಕ್ರಮ ಹೊರ ತಂದಿದ್ದು ನಾನು, ಸಿದ್ದರಾಮಯ್ಯನಲ್ಲ. ಅವರು ಸುಳ್ಳಿನ ರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯನವರೇ, ನಿಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲಿ ಮಾತನಾಡಿ. ಅಧಿಕಾರಕ್ಕಾಗಿ ಕುತಂತ್ರದ ರಾಜಕಾರಣ ಮಾಡುತ್ತೀರಿ. ಬಿಜೆಪಿಯವರೂ ನನಗೆ ಸಿಎಂ ಸ್ಥಾನ ಕೊಡಲು ರೆಡಿಯಾಗಿದ್ರು. ನಾಚಿಗೆಯಾಗಬೇಕು ನಿಮಗೆ. ಕಾಂಗ್ರೆಸ್‌ನವರಿಂದ ಇನ್ನು ಹತ್ತು ವರ್ಷಗಳಾದ್ರು ಬಿಜೆಪಿಯನ್ನ ತೆಗೆಯೋಕೆ ಆಗುವುದಿಲ್ಲ, ಜೆಡಿಎಸ್ನಿಂದ ಮಾತ್ರ ಸಾಧ್ಯ ಎಂದರು.
ಬ್ರಾಹ್ಮಣ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಇಡೀ ಬ್ರಾಹ್ಮಣ ಸಮುದಾಯ ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡ್ತಿಲ್ಲ. ನಾನು ಬ್ರಾಹ್ಮಣರು ಸಿಎಂ ಆಗಬಾರದು ಎಂದಿಲ್ಲ, ಪೇಶ್ವೆ ಡಿಎನ್ಎ ಸಿಎಂ ಆಗಬಾರದು ಅಂದಿದ್ದೇನೆ. ಈಗಲೂ ನನ್ನ ಹೇಳಿಕೆಗೆ ಬದ್ಧ. ಯಾವ ಸಮಾಜದವರು ಬೇಕಾದರೂ ಸಿಎಂ ಆಗಲಿ. ಆದರೆ, ಪೇಶ್ವೆ ಡಿಎನ್‌ಎ ಇರೋರು ಮಾತ್ರ ಆಗಬಾರದು ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.
ಮುಂಬೈ ಕರ್ನಾಟಕದಲ್ಲಿ ಪಂಚರತ್ನ ಯಾತ್ರೆ ನಡೆಸಿದ್ದೇನೆ. ಮಾರ್ಚ್ 23ರ ವರೆಗೆ ರಥ ಯಾತ್ರೆ ಮುಂದುವರೆಸುತ್ತೇನೆ. ನಮ್ಮ ಯೋಜನೆಗಳ ಕುರಿತು ಜನತೆಗೆ ಮನವರಿಕೆ ಮಾಡಲು ಯಾತ್ರೆ ಮಾಡ್ತಿದ್ದೇನೆ. ಜನತೆಗೆ ಹೊಸ ಬದಲಾವಣೆ ತರಬೇಕೆಂದಿದೆ. ಗೋವಾದಲ್ಲಿ ಬಿಜೆಪಿ ನಾಯಕರು ಕ್ಯಾತೆ ತೆಗೆದಿದ್ದಾರೆ. ಚುನಾವಣೆ ನೆಪದಲ್ಲಿ ಜನರ ದಾರಿ ತಪ್ಪಿಸೋ ಯತ್ನ ನಡೆಸಿದ್ದಾರೆ. ಏರ್ ಶೋ ಬಡತನ ಓಡಿಸೋ ಕಾರ್ಯಕ್ರಮವಾ?, ಏರ್ ಶೋಗೆ ಪ್ರಧಾನಿ ಮೋದಿ ಬರೋದ್ರಿಂದ ಬಡತನ ನಿವಾರಣೆಯಾಗುತ್ತಾ? ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ:ಪರಿಶಿಷ್ಟರು, ಬ್ರಾಹ್ಮಣರು ಯಾರು ಬೇಕಾದ್ರೂ ಸಿಎಂ ಆಗ್ಬಹುದು: ಸಚಿವ ಶ್ರೀರಾಮುಲು