ಹುಬ್ಬಳ್ಳಿ :ಏನೇ ಟೀಕೆ ಮಾಡಿದರೂ ಅದಕ್ಕೆ ಬೇಸ್ ಇರಬೇಕು. ಆದರೆ, ಮಾಜಿ ಮುಖ್ಯಮಂತ್ರಿ ಹೆಚ್ ಡಿಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.
ಬಿಜೆಪಿಯೊಂದಿಗೆ ಕೈ ಜೋಡಿಸಿದ ಮೇಲೆ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದು, ಸಚಿವ ಜಾರ್ಜ್ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಏನು ಮಾಡುತ್ತಿದ್ದರು? ಎಂದೆಲ್ಲ ಪ್ರಶ್ನೆ ಕೇಳುತ್ತಿರುವ ಬಗ್ಗೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಕೆಲ ತಿಂಗಳ ಹಿಂದೆ ಪೆನ್ಡ್ರೈವ್ ವಿಚಾರದಲ್ಲಿಯೂ ಇದೇ ಆಯಿತು. ಕುಮಾರಸ್ವಾಮಿ ಅವರು ಕೇವಲ ಟೀಕೆ ಮಾಡುವ ಸಲುವಾಗಿ ಟ್ವೀಟ್ ಮಾಡಿದರೆ ಅದರಿಂದ ಏನೂ ಉಪಯೋಗ ಆಗಲ್ಲ. ಮಾಧ್ಯಮದಲ್ಲಿ ಚರ್ಚೆ ಆಗುತ್ತೆ ಹೊರತು ವಾಸ್ತವವಾಗಿ ಏನೂ ಗೊತ್ತಾಗುವುದಿಲ್ಲ. ಕೇವಲ ಪ್ರಶ್ನೆ ಆಗಿಯೇ ಉಳಿಯುತ್ತದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರೀ ಹೆಸರು ಕೇಳಿ ಬರೋದೆ ಆಯ್ತು. ಯಾರು ಅಧ್ಯಕ್ಷರು ಎಂದು ಬಹಿರಂಗವಾಗಿ ಹೇಳಲಿ. ದೆಹಲಿ ವರಿಷ್ಠರು ಒಂದು ಹೆಸರು ಬಿಟ್ಟು ಪ್ಲಸ್ ಮೈನಸ್ ನೋಡುತ್ತಾರೆ. ಅದು ಫೇಲ್ ಆಯಿತು ಎಂದರೆ ಮತ್ತೆ ಬೇರೆ ಹೆಸರು ಬಿಡುತ್ತಾರೆ. ಇದನ್ನೇ ಇಷ್ಟು ದಿನದವರೆಗೆ ಪ್ರಯೋಗ ಮಾಡುತ್ತಿದ್ದಾರೆ. ಈ ಬಗ್ಗೆ ಶೋಭಾ ಕರಂದ್ಲಾಜೆ ಊಹಾಪೋಹ ಅಂತ ಹೇಳಿದ್ದಾರೆ. ಇದನ್ನು ಹೇಗೆ ಅಧಿಕೃತ ಅಂತ ಹೇಳಿತ್ತಿರ. ಇದಕ್ಕೆ ಯಾವುದೇ ಅರ್ಥ ಇಲ್ಲ. ಒಂದು ರಾಷ್ಟ್ರೀಯ ಪಕ್ಷದ ಫೇಲ್ಯೂರ್ ಆಗಬೇಕು ಅನ್ನೋ ಉದಾಹರಣೆಗೆ ಇದ್ದರೆ, ಇದಕ್ಕೆ ರಾಜ್ಯ ಬಿಜೆಪಿಯೇ ಉದಾಹರಣೆ ಎಂದು ಶೆಟ್ಟರ್ ಟೀಕಿಸಿದರು.
ಅಂದಿನಿಂದಲೂ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ : ಬಿಜೆಪಿಗೆ ರಾಜ್ಯಾಧ್ಯಕ್ಷರನ್ನು, ವಿಪಕ್ಷ ನಾಯಕರನ್ನು ಆಯ್ಕೆ ಮಾಡದ ಶೋಚನೀಯ ಪರಿಸ್ಥಿತಿ ಬಂದಿದೆ. ಜನರ ಆಶೋತ್ತರಗಳಿಗೆ ತಕ್ಕಂತೆ ನಾನು ಪ್ರವಾಸ ಮಾಡುತ್ತಿದ್ದೇನೆ. ನಾನು ಕಾಂಗ್ರೆಸ್ ಬಂದ ಮೇಲೆ ಮಾತ್ರವಲ್ಲ, ಮೊದಲಿಂದಲೂ ಪ್ರವಾಸ ಮಾಡುತ್ತಿದ್ದೇನೆ. ಮೊದಲಿಂದಲೂ ರಾಜ್ಯ ಪ್ರವಾಸ ಮಾಡುವ ನಾಯಕತ್ವ ಗುಣ ಬೆಳೆದುಬಂದಿದೆ. ಹಿಂದೆಯೂ ರಾಜ್ಯ ಪ್ರವಾಸ ಮಾಡುವುದು ನಡೆದುಕೊಂಡು ಬಂದಿದೆ. ಅದನ್ನು ಈಗ ಮುಂದುವರಿಸಿದ್ದೇನೆ ಅಷ್ಟೇ ಎಂದು ಶೆಟ್ಟರ್ ಸ್ಪಷ್ಟನೆ ನೀಡಿದರು.