ಹುಬ್ಬಳ್ಳಿ: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧವು ಭಾರತವನ್ನು ಅಕ್ಷರಶಃ ಆತಂಕಕ್ಕೆ ಸಿಲುಕಿಸಿದೆ. ಕಳೆದೆರಡು ದಿನಗಳ ಹಿಂದಷ್ಟೇ ಹಾವೇರಿ ಜಿಲ್ಲೆಯ ಯುವಕ ಶೆಲ್ ದಾಳಿಗೆ ಬಲಿಯಾಗಿದ್ದ ಘಟನೆ ಪೋಷಕರ ಉದ್ವೇಗ ಹೆಚ್ಚಿಸಿತ್ತು. ಆದರೆ, ಈಗ ಹೊಸ ಆಶಾಭಾವವೊಂದು ಮೊಳಕೆಯೊಡೆದಿದೆ.
ಉಕ್ರೇನ್ ಯುದ್ಧಭೂಮಿಯಿಂದ ಹಾವೇರಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಹುಬ್ಬಳ್ಳಿಯ ಏರ್ಪೋರ್ಟ್‌ಗೆ ಬಂದಿಳಿದಿದ್ದು, ಮಕ್ಕಳ ಮುಖ ನೋಡಿದ ಪೋಷಕರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಕ್ಕಳನ್ನು ಕಂಡ ಕೂಡಲೇ ಪೋಷಕರು ಹಾಗೂ ಮಕ್ಕಳ ಕಣ್ಣಲ್ಲಿ ಕಣ್ಣೀರು ಜಿನುಗಿತು.
ಹಾನಗಲ್ಲಿನ ಶಿವಾನಿ ಮಡಿವಾಳರ ಹಾಗೂ ಶಿಗ್ಗಾವಿಯ ತರೂರಿನ ರಂಜಿತಾ ಉಕ್ರೇನ್ದಿಂದ ಆಗಮಿಸಿದ್ದಾರೆ. ನಾಲ್ಕು ವರ್ಷದ ಹಿಂದಷ್ಟೇ ಉಕ್ರೇನ್ಗೆ ಹೋದ ವಿದ್ಯಾರ್ಥಿನಿಯರು ಯುದ್ಧ ಭೂಮಿಯಿಂದ ತಾಯಿನಾಡಿಗೆ ಆಗಮಿಸಿದ್ದು, ಪಾಲಕರಲ್ಲಿ ಸಂತೋಷ ಉಂಟುಮಾಡಿದೆ.
ಉಕ್ರೇನ್ನಿಂದ ಹುಬ್ಬಳ್ಳಿಗೆ ಆಗಮಿಸಿದ ಹಾವೇರಿ ವಿದ್ಯಾರ್ಥಿನಿಯರು ಇದನ್ನೂ ಓದಿ:ಉಕ್ರೇನ್ ಯುದ್ಧದಲ್ಲಿ ನಿಷೇಧಿತ ಅಸ್ತ್ರ ಬಳಸುತ್ತಿದೆಯೇ ರಷ್ಯಾ? ಥರ್ಮೋಬ್ಯಾರಿಕ್ ಶಸ್ತ್ರಾಸ್ತ್ರ ಎಂದರೇನು?
ಹಾನಗಲ್ ತಾಲೂಕಿನ ಇಬ್ಬರೂ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯಿನಾಡಿಗೆ ಆಗಮಿಸಿದ್ದಾರೆ. ಈ ಬಗ್ಗೆ ಹಾನಗಲ್ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಮುತುವರ್ಜಿ ವಹಿಸಿ ಇಂತಹದ್ದೊಂದು ಕಾರ್ಯವನ್ನು ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಅಭಿನಂದನೆ ಸಲ್ಲಿಸಿದ್ದಾರೆ. ತಾವು ಬದುಕಿ ಬಂದಿದ್ದೇ ಪವಾಡ. ಸಾಕಷ್ಟು ಕಷ್ಟ ಅನುಭವಿಸಿ ಬಂದಿದ್ದೇವೆ. ನಮಗೆ ಗೊತ್ತಿರುವ ನವೀನನ ಸಾವು ದುಃಖ ತರಿಸಿದೆ ಎಂದು ನೋವು ಹಂಚಿಕೊಂಡರು.