ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ: ಪ್ರಧಾನಿ ನರೇಂದ್ರಮೋದಿ ಅವರ ಸಂಪುಟದಲ್ಲಿ ಕೆಲಸ ಮಾಡಲು ನನಗೆ ಅತ್ಯಂತ ಖುಷಿಯಿದೆ. ಅದು ನನ್ನ ಸೌಭಾಗ್ಯವೂ ಹೌದು. ಇಡೀ ವಿಶ್ವವೇ ಮೋದಿಯನ್ನು ನಿಬ್ಬೆರಗಾಗಿ ನೋಡ್ತಿದೆ. ಹೀಗಿರುವಾಗ ನಾನು ರಾಜ್ಯ ರಾಜಕಾರಣದತ್ತ ಬರೋಲ್ಲ. ಮುಖ್ಯಮಂತ್ರಿ ಆಗೋ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಪೇಶ್ವೆ ಮೂಲದವರನ್ನು ಸಿಎಂ ಮಾಡಲು ಹೊರಟಿದ್ದಾರೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಅಪ್ರಬುದ್ಧ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ. ಮೋದಿ ಅವರ ಕೈಕೆಳಗೆ ಕೆಲಸ ಮಾಡಲು ನನಗೆ ಅತ್ಯಂತ ಖುಷಿಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂತ್ರಿ ಮಂಡಲದಲ್ಲಿ ನನಗೆ ಜನರ ಸೇವೆ ಮಾಡಲು ಪ್ರಮುಖ ಸಚಿವ ಸ್ಥಾನವನ್ನೂ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಮೋದಿಯಂತಹ ನಾಯಕರು ಸಿಗೋದು ಶತಮಾನಕ್ಕೊಬ್ಬರು. ಮೋದಿ ನೇತೃತ್ವದಲ್ಲಿ ಭಾರತ ನಂಬರ್ ಒನ್ ನತ್ತ ದಾಪುಗಾಲು ಹಾಕ್ತಿದೆ. ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ ಎಂದು ತಿಳಿಸಿದರು.
ಕಿವಿ ಮೇಲೆ ಹೂವಿಟ್ಟುಕೊಂಡೇ ಓಡಾಡಬೇಕಾಗುತ್ತೆ:ಕಾಂಗ್ರೆಸ್ ನವರು ಇನ್ನು ಮುಂದೆ ಕಿವಿ ಮೇಲೆ ಹೂವಿಟ್ಟುಕೊಂಡೇ ಓಡಾಡಬೇಕಾಗುತ್ತೆ. ಇಡೀ ದೇಶದಲ್ಲಿ ಕಾಂಗ್ರೆಸ್ ಜನರಿಂದ ತಿರಸ್ಕೃತಗೊಂಡಿದೆ. ಅಷ್ಟಿದ್ದರೂ ಕಾಂಗ್ರೆಸ್ ನವರು ಬಜೆಟ್ ಮಂಡನೆ ವೇಳೆ ಕಿವಿಯಲ್ಲಿ ಹೂವಿಟ್ಟುಕೊಂಡು ಸದನಕ್ಕೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಸ್ವಂತ ಶಕ್ತಿಯ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ:ಕಾಂಗ್ರೆಸ್ಗೆ ಎಲ್ಲಾ ಕಡೆ ಜನ ಈಗಾಗಲೇ ಹೂವಿಟ್ಟಿದ್ದಾರೆ. ಇನ್ಮುಂದೆ ತಾವಾಗಿಯೇ ಹೂವಿಟ್ಟುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ. ನೆಹರೂ ನಿಧನದ ನಂತರ ಅವರ ಹೆಸರಲ್ಲಿ ಇಂದಿರಾ ಅಧಿಕಾರಕ್ಕೆ ಬಂದರು. ಇಂದಿರಾ ಗಾಂಧಿ ಸಾವಿನ ನಂತರ ಅವರ ಹೆಸರಲ್ಲಿ ಕಾಂಗ್ರೆಸ್ನವರು ಅಧಿಕಾರದ ಗದ್ದುಗೆ ಹಿಡಿದರು. ಸ್ವಂತ ಶಕ್ತಿಯ ಮೇಲೆ ಎಂದೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಈಗ ಅಧಿಕಾರ ಕಳೆದುಕೊಂಡು ಪರಿತಪಿಸುತ್ತಾ ಹೀಗೆ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದರು.
ಅಶ್ವತ್ಥನಾರಾಯಣ ಬಾಯಿತಪ್ಪಿ ಹೇಳಿಕೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಮಂಡ್ಯದ ಜನರು ಟಿಪ್ಪು ಸುಲ್ತಾನ್ಗೆ ಹೊಡೆದ ರೀತಿಯಲ್ಲಿ ಹೊಡೆಯಬೇಕೆಂಬ ಸಚಿವ ಅಶ್ವತ್ಥನಾರಾಯಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಶ್ವತ್ಥನಾರಾಯಣ ಅವರೇ ಈಗಾಗಲೇ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಶ್ವತ್ಥನಾರಾಯಣ ಆ ಅರ್ಥದಲ್ಲಿ ಹೇಳಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ರಾಜಕೀಯವಾಗಿ ಕಾಂಗ್ರೆಸ್ ಪಕ್ಷವನ್ನು ಮುಗಿಸಬೇಕೆಂದು ಆ ತರಹದಲ್ಲಿ ಹೇಳಿದ್ದಾರೆ. ಹೀಗಾಗಿ ಅದನ್ನು ಬೆಳೆಸಿಕೊಂಡು ಹೋಗೋದು ಸರಿಯಲ್ಲ. ಬಾಯಿ ತಪ್ಪಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಹಲವಾರು ಬಾರಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಮೇಲೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಭೋಜೇಗೌಡ ವಿರುದ್ಧ ಕಾನೂನು ಕ್ರಮ: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆರೋಪ, ಪ್ರತ್ಯಾರೋಪ ತಾರಕಕ್ಕೇರಿವೆ. ಈ ಮಟ್ಟಕ್ಕಿಳಿದು ಮಾತನಾಡೋದು ಯಾರಿಗೂ ತರವಲ್ಲ. ಜೋಶಿ ಕಚೇರಿಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಆರೋಪಕ್ಕೆ ಪ್ರತಿಕ್ರಿಯಿಸಿ, ಭೋಜೇಗೌಡ ಆಧಾರ ರಹಿತ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ಮಾಡ್ತೇನೆ ಎಂದು ತಿಳಿಸಿದರು.
ಇದನ್ನೂಓದಿ:ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನನ್ನ ಅಧಿಕಾರ ವ್ಯಾಪ್ತಿ ಅಲ್ಲ: ಸುರ್ಜೆವಾಲಾ