ಹುಬ್ಬಳ್ಳಿ:ಧಾರವಾಡ ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಸುರಿದ ಜೋರು ಮಳೆಗೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅತಿವೃಷ್ಟಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿದ ಅವರು, ಅನಿರೀಕ್ಷಿತ ಮಳೆಯಿಂದ ಕಾಳು ಕಟ್ಟುವ ಹಂತದಲ್ಲಿದ್ದ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 2.73 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ 89,148 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. 61,566 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಹಾನಿಯಾಗಿದ್ದು, 916 ಹೆಕ್ಟೇರ್ ಉದ್ದು ಹಾನಿಯಾಗಿದೆ.
ಈ ಕುರಿತು ಅಧಿಕಾರಿಗಳು ಸರ್ವೆ ರಿಪೋರ್ಟ್ ಸಿದ್ಧಪಡಿಸಿದ್ದಾರೆ. ಎನ್.ಡಿ.ಆರ್.ಎಫ್ ನಿಯಮಗಳ ಅನ್ವಯ ಪರಿಹಾರ ಕೊಡಲಾಗುವುದು. ಇದರೊಂದಿಗೆ ರಾಜ್ಯ ಸರ್ಕಾರದ ನೆರವೂ ಸೇರಿ ಪ್ರತಿ ಹೆಕ್ಟೇರ್ಗೆ 13,600 ಪರಿಹಾರ ನೀಡಲಾಗುವುದು. ಬೆಳೆ ವಿಮೆ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯೆ:ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಹೇಳಿಕೆಯನ್ನು ಖಂಡಿಸಿ ಮಾತನಾಡಿದ ಸಚಿವರು, ರಾಜ್ಯ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪೂರ್ಣಾವಧಿ ಆಡಳಿತ ನಡೆಸಲಿದ್ದು, ಜನರ ಪ್ರೀತಿಗೆ ಪಾತ್ರವಾಗಲಿದೆ. ಬೊಮ್ಮಾಯಿ ಅವರು ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವುಗಳನ್ನು ಸಹಿಸಲಾರದೇ ಕಾಂಗ್ರೆಸ್ ಪಕ್ಷ ಈ ರೀತಿ ಅಪಪ್ರಚಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ: ಸಚಿವ ಅಶೋಕ್