ಹುಬ್ಬಳ್ಳಿ: ರಾಜ್ಯದ ಜನರ ಹಿತದೃಷ್ಟಿಯಿಂದ ಉಪಚುನಾವಣೆ ನಂತರ ಮಹತ್ವದ ಬದಲಾವಣೆಗಳಾಗಲಿವೆ. ನನ್ನ ಪಕ್ಷ ರಾಜ್ಯದ ಜನರ ಹಿತದೃಷ್ಟಿಯನ್ನಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಉಪಚುನಾವಣೆ ಫಲಿತಾಂಶ ಎಲ್ಲ ರಾಜಕೀಯ ಪಕ್ಷಗಳಿಗೆ ಅಚ್ಚರಿಯ ಫಲಿತಾಂಶ ನೀಡಲಿದೆ. ರಾಜ್ಯದ ಮುಂದಿನ ಭವಿಷ್ಯದ ದೃಷ್ಟಿಯಿಂದ ಮಹತ್ವದ ಚುನಾವಣೆಯಾಗಿದೆ ಎಂದರು. ಹದಿನೈದು ಅನರ್ಹರನ್ನು ಬಿಜೆಪಿಯವರು ಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅವರ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಅಂತಹವರನ್ನು ರಾಜ್ಯದ ಮಂತ್ರಿ ಮಾಡಿದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಒಳ್ಳೆಯ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಜೆಡಿಎಸ್ನವರು ಅಧಿಕಾರಕ್ಕಾಗಿ ಯಾರಿಗೆ ಬೇಕಾದರೂ ಕೊಡ ಹಿಡಿಯುತ್ತಾರೆ ಎಂಬ ಶ್ರೀನಿವಾಸ ಪ್ರಸಾದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೇ ನೀಡಿದ ಅವರು, ಶ್ರೀನಿವಾಸ ಪ್ರಸಾದ ಇಲ್ಲಿಯವರೆಗೆ ಎಲ್ಲ ಪಕ್ಷಗಳನ್ನು ಬದಲಾಯಿಸಿದ್ದಾರೆ. ಅವರು ಎಲ್ಲ ಕಡೆಯೂ ಅಲೆದಾಡಿದ್ದಾರೆ. ಆದರೇ ನಾವು ಅವರಂತೆ ಎಲ್ಲಿ ಬೇಕೋ ಅಲ್ಲಿ ಕೊಡೆ ಹಿಡಿಯುವುದಿಲ್ಲ. ನಮಗೆ ಎಲ್ಲಿ ಅನುಕೂಲ ಆಗುತ್ತದೆ ಅಲ್ಲಿ ಮಾತ್ರ ಕೊಡೆ ಹಿಡಿಯುತ್ತೇವೆ. ಶ್ರೀನಿವಾಸ ಪ್ರಸಾದ ಅವರು ಹಿರಿಯರಿದ್ದಾರೆ. ಬಾಯಿ ಚಪಲಕ್ಕೆ ಏನು ಬೇಕಾದರೂ ಮಾತನಾಡಬಾರದು. ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.