ಹುಬ್ಬಳ್ಳಿ: ಮೂರು ಸಾವಿರ ಮಠದ ಹಾಲಿ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ತಮ್ಮ ಸ್ವಾರ್ಥಕ್ಕಾಗಿ ಮಠವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದಾರೆ. ಅಳುವುದು, ಮಠ ಬಿಟ್ಟು ಓಡಿ ಹೋಗುವುದಷ್ಟೇ ಅವರಿಗೆ ಗೊತ್ತು ಎಂದು ಡಾ. ವಿಜಯಸಂಕೇಶ್ವರ ಮೂಜಗು ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸ್ವಾಮೀಜಿ ಮಠದ ಆಸ್ತಿಗಳನ್ನು ಸ್ವಂತಕ್ಕಾಗಿ ಮಾರಿರುವ ದಾಖಲೆಗಳಿವೆ. ಹೀಗಾಗಿ ಮಠದ ಅಭಿವೃದ್ಧಿಗಾಗಿ ದಿಂಗಾಲೇಶ್ವರ ಸ್ವಾಮೀಜಿ ಉತ್ತರಾಧಿಕಾರಿಯಾಗುವುದು ಒಳ್ಳೆಯದು. ಅವರಲ್ಲದೇ ಬೇರೆಯವರನ್ನು ಉತ್ತರಾಧಿಕಾರಿ ಮಾಡಿದ್ರು, ನನ್ನಗೆ ವೈಯಕ್ತಿಕವಾಗಿ ಅಭ್ಯಂತರವಿಲ್ಲ ಎಂದರು.
ಡಾ. ವಿಜಯಸಂಕೇಶ್ವರ ಮೂಜಗು ಶ್ರೀಗಳ ವಿರುದ್ಧ ವಾಗ್ದಾಳಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಅನವಶ್ಯಕವಾಗಿ ಕಳಂಕಿತರೆಂದು ಬಿಂಬಿಸಲಾಗಿದೆ. ದಿಂಗಾಲೇಶ್ವರ ಸ್ವಾಮೀಜಿಯನ್ನು ಫೆ. 23ಕ್ಕೆ ಮಠದೊಳಗೆ ಕರೆದುಕೊಳ್ಳಲಿ. ಮೂಜಗು ಸ್ವಾಮೀಜಿ ವೀರಶೈವ ಸಮಾಜಕ್ಕೆ ಇದೊಂದು ಅನುಕೂಲ ಮಾಡಲಿ ಎಂದರು.
ಮೂಜಗು ಸ್ವಾಮೀಜಿ ಬಂದ ಮೇಲೆ ಮಠದ ಚಟುವಟಿಕೆಗಳು ಕಡಿಮೆಯಾಗಿವೆ. ಅವರು ಕೋರ್ಟ್ ಕೆಲಸಗಳಿಗಾಗಿ ಹಣಕಾಸಿನ ಸಾಲ ಮಾಡಿದ್ದರು. ಅದನ್ನು ದಿಂಗಾಲೇಶ್ವರ ಸ್ವಾಮೀಜಿ ಹಣಕೊಟ್ಟು ಬಗೆಹರಿಸಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಬಾಲೆಹೊಸೂರಿನಲ್ಲಿ ಉತ್ತಮವಾಗಿ ಮಠ ನಡೆಸುತ್ತಿದ್ದಾರೆ. ದಿಂಗಾಲೇಶ್ವರರನ್ನು ಉತ್ತರಾಧಿಕಾರಿ ಮಾಡಲು ಹಾಲಿ ಮೂಜಗು ಸ್ವಾಮೀಜಿಗಳು ನಿರ್ಧರಿಸಿದ್ದರು. ಇದನ್ನು ಮಠದ ಪ್ರಮುಖರಿಗೆ ತಿಳಿಸಿದ್ದರು.
ಮೂಜಗು ಸ್ವಾಮೀಜಿ ಆಗ್ರಹದಂತೆ ನಾವೆಲ್ಲಾ ದಿಂಗಾಲೇಶ್ವರರನ್ನು ಉತ್ತರಾಧಿಕಾರಿ ಮಾಡಲು ಒಪ್ಪಿದ್ದೆವು. ಇದರಂತೆ ಕೋರ್ಟ್ ಅಫಿಡವಿಟ್ ಮಾಡಿ 52 ಜನ ಪ್ರಮುಖರು ಸಹಿ ಮಾಡಿದ್ದೇವೆ. ಇದಾದ ನಂತರ ದಿಂಗಾಲೇಶ್ವರರ ಮೇಲೆ ಹಲವು ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಈಗ ಉತ್ತರಾಧಿಕಾರಿ ವಿವಾದ ಮುನ್ನೆಲೆಗೆ ಬಂದಿದೆ. ಸ್ವಾಮೀಜಿಗಳು ನನ್ನ ಹೆಸರು ಹೇಳಿದ್ದರಿಂದ ಇರುವ ಸತ್ಯ ಹೇಳಲು ಬಂದಿದ್ದೇನೆ.ಮೂಜಗು ಸ್ವಾಮೀಜಿ ಉತ್ತರಾಧಿಕಾರಿ ವಿವಾದವನ್ನು ಚರ್ಚೆಯ ಮೂಲಕ ಬಗೆಹರಿಸಬೇಕು. ಮೂಜಗು ಮತ್ತು ದಿಂಗಾಲೇಶ್ವರ ಸ್ವಾಮೀಜಿ ಸೇರಿ ಮಠದ ಅಭಿವೃದ್ಧಿ ಮಾಡಬೇಕು ಎಂದರು.