ಕರ್ನಾಟಕ

karnataka

ETV Bharat / state

'ಜೈನಮುನಿ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಬೇಡ; ಮನ ಪರಿವರ್ತನೆಯಾಗಲಿ': ಉಪವಾಸ ಕೈಬಿಟ್ಟು ಗುಣಧರನಂದಿ ಮುನಿಶ್ರೀ ಬಾವುಕನುಡಿ - ಹುಬ್ಬಳ್ಳಿ

ಜೈನ ಮುನಿಯನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಬೇಡ. ಆರೋಪಿಗಳ ಮನ ಪರಿವರ್ತನೆ ಆಗಬೇಕು. ನಾನು ಕ್ಷಮಾದಾನ ನೀಡುತ್ತೇನೆ ಎಂದು ಗುಣಧರನಂದಿ ಮಹಾರಾಜ್ ಹೇಳಿದ್ದಾರೆ.

Home Minister Dr. G Parameshwar meets Gunadhara Nandi Maharaj
ಗುಣಧರನಂದಿ ಮಹಾರಾಜ್ ಸ್ವಾಮೀಜಿ ಭೇಟಿ ಮಾಡಿದ ಗೃಹ ಸಚಿವರು

By

Published : Jul 10, 2023, 1:54 PM IST

ಶ್ರೀ ಗುಣಧರನಂದಿ ಮುನಿ ಮಹಾರಾಜರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹುಬ್ಬಳ್ಳಿ: "ಜೈನ ಮುನಿ ಹತ್ಯೆಯನ್ನು ಎಲ್ಲ ರಾಜಕೀಯ ಪಕ್ಷದವರು ಖಂಡಿಸಿದ್ದಾರೆ. ಇದಕ್ಕೆ ಧನ್ಯವಾದ. ಇಂತಹ ಕೃತ್ಯ ಆಗಲೇಬಾರದು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ​ ಭೇಟಿ ಬಳಿಕ ನಾನು ಉಪವಾಸ ಸತ್ಯಾಗ್ರಹ ಹಿಂಪಡೆಯುತ್ತೇನೆ" ಎಂದು ಗುಣಧರನಂದಿ ಮುನಿ ಮಹಾರಾಜರು ಹೇಳಿದರು. ಇದೇ ವೇಳೆ ಹಂತಕರಿಗೆ ಕಠಿಣ ಶಿಕ್ಷೆ ಬೇಡ, ಅವರ ಮನ ಪರಿವರ್ತನೆಯಾಗಲಿ ಎಂದರು.

ವರೂರಿಗೆ ಇಂದು ಗೃಹ ಸಚಿವ ಜಿ.ಪರಮೇಶ್ವರ್‌ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈನ ಮುನಿಗಳು, "ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ್​ ನಮ್ಮ‌ ಜೊತೆ ಮಾತನಾಡಿದ್ದಾರೆ. ಹೀಗಾಗಿ ನಾನು ಉಪವಾಸ ಸತ್ಯಾಗ್ರಹ ಹಿಂಪಡೆಯತ್ತೇನೆ. ಈ ಹೋರಾಟ ರಾಜಕೀಯ ಹೋರಾಟ ಆಗಲಾರದು. ಮಠಕ್ಕೆ ಎಲ್ಲ ಪಕ್ಷದವರ (ಬಿಜೆಪಿ, ಕಾಂಗ್ರೆಸ್​) ಸಹಕಾರವಿದೆ. ಇಲ್ಲಿರುವ ರಸ್ತೆಗೆ ಸಿದ್ದರಾಮಯ್ಯ ಅನುದಾನ ಕೊಟ್ಟಿದ್ದಾರೆ‌. ಎಲ್ಲ ಪಕ್ಷದವರೂ ನನಗೆ ಸಹಕಾರ ಕೊಟ್ಟಿದ್ದಾರೆ. ಜೈನ ಮುನಿಯನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬಾರದು. ನಾವು ಅಹಿಂಸಾವಾದಿಗಳು. ಕೊಲೆ ಮಾಡಿದವರ ಮನ ಪರಿವರ್ತನೆ ಆಗಲಿ. ನಾನು ಕ್ಷಮಾದಾನ ನೀಡುತ್ತೇನೆ" ಎಂದರು.

"ನಮ್ಮ ಬೇಡಿಕೆಗೆ ಸಚಿವ ಜಿ. ಪರಮೇಶ್ವರ್​ ಒಪ್ಪಿಕೊಂಡಿದ್ದಾರೆ. ಗೃಹ ಸಚಿವರ ಮೇಲೆ ನಮಗೆ ಶೇ 100 ರಷ್ಟು ಗ್ಯಾರಂಟಿ ಇದೆ. ಅವರು ನಮಗೆ ಬರವಣಿಗೆಯ ಮೂಲಕ ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ. ಕ್ಯಾಬಿನೆಟ್ ಇದ್ದರೂ ಇಲ್ಲಿಗೆ ಬಂದಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಕರ್ನಾಟಕದಲ್ಲಿ ಶಾಂತಿ ನೆಲೆಸಲಿ. ಪಂಚ ಪೀಠಾಧಿಪತಿಗಳು ನಮ್ಮ ಜತೆ ನಿಂತರು. ಕೆಲವು ಮುಸ್ಲಿಂ ಸಮುದಾಯದ ಜನರೂ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ" ಎಂದು ಹೇಳುತ್ತಾ ಮುನಿಗಳು ಸುದ್ದಿಗೋಷ್ಠಿಯಲ್ಲಿ ಭಾವುಕರಾದರು‌.

"ಅಮೆರಿಕದಲ್ಲಿ ಕೂಡ ಸತ್ಯಾಗ್ರಹ ಮಾಡಿದ್ದಾರೆ. ಹೆಬ್ಬಾಳ್ಕರ್, ಸವದಿ, ಬೊಮ್ಮಾಯಿ ಎಲ್ಲರೂ ಕರೆ ಮಾಡಿ ದುಃಖ ವ್ಯಕ್ತಪಡಿಸಿದರು. ನನ್ನಿಂದ ನೋವಾಗಿದ್ದರೆ ಎಲ್ಲರಿಗೂ ಕ್ಷಮೆ ಕೇಳ್ತೀನಿ. ಇದೇ ವೇಳೆ, ಜೈನ ನಿಗಮ ಸ್ಥಾಪನೆ ಮಾಡಬೇಕು. ನಮ್ಮ ಬೇಡಿಕೆಯನ್ನು ಸಚಿವರಾದ ಜಿ. ಪರಮೇಶ್ವರ್​ ಈಡೇರಿಸುವ ನಂಬಿಕೆ ಇದೆ" ಅವರು ತಿಳಿಸಿದರು.

ಚಿಕ್ಕೋಡಿಯ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯ ಹಿನ್ನೆಲೆಯಲ್ಲಿ ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜ​ ಮುನಿಗಳಿಗೆ ಹಾಗೂ ಜೈ‌ನ ಬಸದಿಗಳಿಗೆ ಸರ್ಕಾರ ರಕ್ಷಣೆ ನೀಡುವಂತೆ ಆಗ್ರಹಿಸಿ ಸಲ್ಲೇಖನ ವ್ರತ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವ ಜಿ. ಪರಮೇಶ್ವರ್​ ನವಗ್ರಹ ಕ್ಷೇತ್ರಕ್ಕೆ ಭೇಟಿ ನೀಡಿ ಮುನಿಗಳಿಗೆ ರಕ್ಷಣೆ ನೀಡುವ ಭರವಸೆ ನೀಡಿದರು. ಬಳಿಕ ಕೆಲಹೊತ್ತು ಮಾತುಕತೆ ನಡೆಸಿ ಅಮರಣ ಉಪವಾಸ ಕೈ ಬಿಡುವಂತೆ ಮನವಿ ಮಾಡಿದರು.

ಗೃಹ ಸಚಿವ ಡಾ. ಜಿ ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, "ಚಿಕ್ಕೋಡಿಯಲ್ಲಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯಾಗಿದೆ. ಇದು ಇತಿಹಾಸ ನೋಡದ ಹತ್ಯೆ. ಈಗಾಗಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆಯಾಗುತ್ತಿದೆ. ತನಿಖೆಯ ಬಳಿಕ ಇನ್ನೂ ಕೆಲವು ವಿಚಾರಗಳು ಬಯಲಿಗೆ ಬರಬಹುದು. ಇದು ಯಾರದೇ ವೈಫಲ್ಯದಿಂದ ನಡೆದ ಘಟನೆಯಲ್ಲ" ಎಂದು ಹೇಳಿದರು.

"ವರೂರಿನ ನವಗ್ರಹ ಕ್ಷೇತ್ರದ ಗುಣಧರನಂದಿ ಮಹಾರಾಜರು ಹತ್ಯೆ ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಇದನ್ನು ನಮ್ಮ ಜಿಲ್ಲಾಧ್ಯಕ್ಷರು ಗಮನಕ್ಕೆ ತಂದಿದ್ದರು. ಕೂಡಲೇ ನಾನು ಮುನಿಗಳ ಜೊತೆ ಮಾತನಾಡಿ ವಿನಂತಿ ‌ಮಾಡಿಕೊಂಡಿದ್ದೇನೆ. ಗೃಹ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನಾವು ನಿಮ್ಮ ಜತೆ ಇದ್ದೇವೆ. ಸರ್ಕಾರ ಜೈನ ಸಮುದಾಯದ ಜತೆ ಇರುವ ಭರವಸೆ ನೀಡಿದ್ದೇನೆ. ಸ್ವಾಮೀಜಿ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ. ನಾನು ಅವರಿಗೆ ಆಭಾರಿ" ಎಂದರು.

"ಈ ಹಿಂದೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನು ಇಲ್ಲಿಗೆ ಕಳಿಸಿಕೊಟ್ಟಿದ್ದೆ. ಅವರು ನಮಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಪರವಾಗಿ ಮುನಿಗಳಿಗೆ ಭರವಸೆ ಕೊಟ್ಟಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕರೆ ಮಾಡಿ ವಿಚಾರಿಸಿದ್ದಾರೆ. ಮುನಿಗಳು ನಾಲ್ಕು ಬೇಡಿಕೆ ಇಟ್ಟಿದ್ದಾರೆ. ಜೈನ ಮುನಿಗಳ ವಿಹಾರದ ವೇಳೆ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಜೈನ ಸಮುದಾಯದ ಸಂಘ- ಸಂಸ್ಥೆಗಳು ಲಿಖಿತ ರೂಪದಲ್ಲಿ ತಿಳಿಸಿದರೆ ನಾವು ಅವರು ರಕ್ಷಣೆ ಕೊಡುತ್ತೇವೆ. ಅದರಂತೆ ಇನ್ನೂ ಹೆಚ್ಚಿನ ರಕ್ಷಣೆ ನೀಡುತ್ತೇವೆ. ಅವರು ತಂಗುವ ಜಾಗ ಅಧಿಕೃತ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಜೈನ ಮುನಿಗಳು ಶಾಲಾ- ಕಾಲೇಜುಗಳಲ್ಲಿ ಉಳಿದುಕೊಳುತ್ತಾರೆ. ಈ ವಿಚಾರವಾಗಿ ನಾನು ಸಚಿವ ಮಧು ಬಂಗಾರಪ್ಪರ ಜೊತೆ ಮಾತಾಡುತ್ತೇನೆ. ಜೈನ ಮಂಡಳಿ ಮಾಡಬೇಕು ಎಂದು ಹೇಳಿದ್ದಾರೆ. ಈಗಾಗಲೇ ಹಿಂದುಳಿದ ವರ್ಗಗಳ ಮಂಡಳಿ ನಿಗಮ ಇದೆ. ಅದರಂತೆ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜೈನ ಸಮುದಾಯದ ಮಂಡಳಿ ಮಾಡಲು ನಿರ್ಧಾರ ಕೈಗೊಳ್ಳುತ್ತೇವೆ. ಬಜೆಟ್ ಮೊದಲೇ ಆಗಿದ್ದರೆ ನಾವು ಪ್ರಕಟಣೆ ಮಾಡುತ್ತಿದ್ದೆವು. ಜೈನ ಮಂದಿರಗಳಿಗೆ ರಕ್ಷಣೆ ಕೊಡಬೇಕು ಎಂದಿದ್ದಾರೆ. ಅದಕ್ಕೆ ನಾವು ಬದ್ದ ಎಂದು ಭರವಸೆ ನೀಡಿದರು.

ಹತ್ಯೆಗೆ ರಾಜಕೀಯ ಬಣ್ಣ ಬೇಡ: "ರಾಜ್ಯದಲ್ಲಿ ಇಂತಹ ಘಟನೆ ಆಗಬಾರದು. ಇಲಾಖೆ ವತಿಯಿಂದ ಮುಂದಿನ ದಿನದಲ್ಲಿ ಕಠಿಣ ಕ್ರಮ ಕೈಗೊಂಡು ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಇದನ್ನೂ ಪ್ರಣಾಳಿಕೆ ಅಧ್ಯಕ್ಷನಾಗಿ ನಾನೇ ಬರೆದಿದ್ದೇನೆ. ಈ ಮಾತಿಗೆ ಸರ್ಕಾರ ನಿಲ್ಲುತ್ತದೆ. ಇಡೀ ಸರ್ಕಾರ ಇದೇ ಮಾತಿಗೆ ದುಡಿಯುತ್ತದೆ. ಇದು ಅತ್ಯಂತ ಘೋರ ಹತ್ಯೆ. ಇದಕ್ಕೆ ರಾಜಕೀಯ ಬಣ್ಣ ಕೊಡಬಾರದು. ಇದರ ಹಿಂದೆ ಕೈಗಳಿವೆ ಎಂದು ಮಾತಾಡೋದನ್ನು ನಿಲ್ಲಸಬೇಕು. ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ" ಎಂದರು.

ಹತ್ಯೆಯ ಆರೋಪಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, "ಇಂತಹ ಮಾತುಗಳನ್ನು ಹೇಳಬಾರದು. ಜನ‌ಪ್ರತಿನಿಧಿಗಳು ಯಾರೂ ಕೂಡ ಹೀಗೆ ಮಾತಾಡಬಾರದು. ಜೈನ ಮುನಿ ಹತ್ಯೆಯನ್ನು ಸಿಬಿಐಗೆ ವಹಿಸುವ ಅನಿವಾರ್ಯತೆ ಇಲ್ಲ" ಎಂದರು. ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ ವಿಚಾರವಾಗಿ ಮಾತನಾಡಿ, "ಕೊಲೆಯಾಗಿದ್ದರೆ ಪೊಲೀಸರು ತನಿಖೆ ಮಾಡ್ತಾರೆ. ಆರೋಪಿಗಳನ್ನು ಬಂಧಿಸುತ್ತಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಜೈನ ಮುನಿಗಳಿಗೆ ರಕ್ಷಣೆ ಸಿಗುವವರೆಗೂ ಉಪವಾಸ ಬಿಡುವುದಿಲ್ಲ : ಗುಣಧರನಂದ ಮಹಾರಾಜ್​

ABOUT THE AUTHOR

...view details