ಹುಬ್ಬಳ್ಳಿ :ಬಹಿರಂಗವಾಗಿ ಅಡ್ಜಸ್ಟ್‌ಮೆಂಟ್ ರಾಜಕಾರಣದ ಬಗ್ಗೆ ಚರ್ಚೆ ಆಗುತ್ತಿರುವುದು ದುರ್ದೈವ. ಬಹಿರಂಗವಾಗಿ ಹೀಗೆ ಮಾತಾಡಬಾರದು. ಇದನ್ನು ನಾಲ್ಕು ಗೋಡೆಗಳ ಮಧ್ಯೆ ಮಾತಾಡಬೇಕು. ಬಿಜೆಪಿಯಲ್ಲಿ ಅಶಿಸ್ತು ಬರಲು ಮೂಲ ಕಾರಣ ವಲಸಿಗರೇ. ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ. ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ನಾವು ಇದನ್ನೆಲ್ಲ ಅನುಭವಿಸುತ್ತಿದ್ದೇವೆ ಎಂದು ಪರೋಕ್ಷವಾಗಿ ಆಪರೇಷನ್ ಕಮಲದ ವಿರುದ್ದ ಬಿಜೆಪಿ ಹಿರಿಯ ಮುಖಂಡ ಕೆ.ಎಸ್ ಈಶ್ವರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.
ನಗರದಲ್ಲಿಂದು ಜಂಟಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಕಾರ್ಯಕರ್ತರು ನಿರಾಶೆಯಲ್ಲಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಏಳು ತಂಡಗಳಲ್ಲಿ ಪ್ರವಾಸ ಕೈಗೊಂಡು ಉತ್ಸಾಹ ತುಂಬುವ ಕೆಲಸ ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಬಿಜೆಪಿ ಸಕಲ ರೀತಿಯಲ್ಲಿ ಸಿದ್ದತೆ ನಡೆಸುತ್ತಿದೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ, ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿ ಎಲ್ಲವನ್ನೂ ಜಾರಿಗೆ ತರುತ್ತೇವೆ ಎಂದು ಹೇಳಿತ್ತು. ಅಧಿಕಾರದಲ್ಲಿದ್ದು ಒಂದೂವರೆ ತಿಂಗಳು ಕಳೆಯುತ್ತಾ ಬಂದರೂ ಯೋಜನೆಗಳನ್ನು ಜಾರಿಗೆ ತರದೇ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ಕೇವಲ ಮಾಧ್ಯಮಗಳ ಮುಂದೆ ಉಡಾಫೆ ಹೇಳಿಕೆ ಕೊಡುತ್ತಾ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲಿಂದ ಹಣ ಹೊಂದಿಸುತ್ತದೆ ಎಂಬ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಬೇಕು ಎಂದು ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.
ವಿದ್ಯುತ್ ದರ ಹೆಚ್ಚಳ ವಿಚಾರವಾಗಿ ಮಾತನಾಡಿ, ಕೆಇಆರ್ಸಿ ಸ್ವಾಭಾವಿಕವಾಗಿ ತನ್ನ ಪ್ರಸ್ತಾವನೆ ಸಲ್ಲಿಸಿದೆ. ಅದನ್ನು ನಮ್ಮ ಸರ್ಕಾರ ತಿರಸ್ಕಾರ ಮಾಡಿತ್ತು. ಇದೀಗ ಕಾಂಗ್ರೆಸ್ ಅದಕ್ಕೆ ಒಪ್ಪಿಗೆ ಸೂಚಿಸಿದೆ. ಈ ದಿಸೆಯಲ್ಲಿ ವಿದ್ಯುತ್ ದರ ಹೆಚ್ಚಳವಾಗಿದೆ. ಯಾರ ಅವಧಿಯಲ್ಲಿ ಕೆಇಆರ್ಸಿ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಲಿ, ಅದನ್ನು ಬಿಟ್ಟು ರಾಜಕೀಯ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಈಶ್ವರಪ್ಪ ಹರಿಹಾಯ್ದರು.
ಕಾಂಗ್ರೆಸ್ ಎಂದರೆ ಸುಳ್ಳಿನ ಪಕ್ಷ. ಅವರು ಸುಳ್ಳು ಹೇಳೋದನ್ನು ನಿಲ್ಲಿಸಬೇಕು. ಐದು ಗ್ಯಾರಂಟಿಗಳನ್ನು ನೀಡಿ ಇದೀಗ ಪ್ರತಿಯೊಂದಕ್ಕೂ ಒಂದೊಂದು ಕಾರಣ ನೀಡುತ್ತಿದ್ದಾರೆ. ಅಕ್ಕಿ ವಿಚಾರದಲ್ಲಿಯೂ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ಇದು ಖಂಡನೀಯ. ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳ ಅನುಷ್ಟಾನವಾಗುವವರೆಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಮಂಡಲ ಅಧಿವೇಶನದ ಒಳಗಡೆ, ಹೊರಗಡೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.