ಹುಬ್ಬಳ್ಳಿ: ಲಾಕ್‌ಡೌನ್ ಸಂದರ್ಭದಲ್ಲಿ ಪ್ರಯಾಣಿಕರ ಲಭ್ಯತೆಯ ಮೇಲೆ, ರಾತ್ರಿ ಬಸ್ ಓಡಿಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. ದೂರದ ಜಿಲ್ಲೆಗಳಿಗೆ ರಾತ್ರಿ ಬಸ್ ಸಂಚಾರ ಆರಂಭವಾಗಿದ್ದು, ಸದ್ಯ ಬಸ್ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ನಗರದಲ್ಲಿಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಇಲ್ಲಿಯವರೆಗೂ ಲಾಕ್ಡೌನ್ನಿಂದ 1,800 ಕೋಟಿ ಹಾನಿಯಾಗಿದೆ. ನಾಲ್ಕು ನಿಗಮದಿಂದ 1 ಲಕ್ಷ 30 ಸಾವಿರ ಸಿಬ್ಬಂದಿ ಬಳಗವಿದೆ. ಸರ್ಕಾರಕ್ಕೆ ನಾವು ಪ್ರಸ್ತಾವನೆ ಕೊಟ್ಟಾಗ ಸರ್ಕಾರ ಅವರಿಗೆ ವೇತನ ಕೊಟ್ಟಿದೆ ಎಂದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮೇ ತಿಂಗಳ ವೇತನದಲ್ಲಿ ಅರ್ಧ ಸಂಬಳವನ್ನು ಸರ್ಕಾರ ಕೊಡಲು ಮುಂದಾಗಿದೆ. ಇನ್ನೂ ಸ್ವಲ್ಪ ಹಣವನ್ನು ನೀಡಬೇಕೆಂದು ನಾನು ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ವಾಯುವ್ಯ ಸಾರಿಗೆ ನಿಗಮಕ್ಕೆ 414 ಹಾನಿಯಾಗಿದೆ. ಈಗ ಪ್ರತಿ ತಿಂಗಳು 90 ಕೋಟಿ ನಮ್ಮ ಸಂಸ್ಥೆ ನಷ್ಟದಲ್ಲಿದೆ. ವೆಚ್ಚವನ್ನು ಕಡಿಮೆ ಮಾಡಿ, ಹಾನಿಯನ್ನು ಕಡಿಮೆ ಮಾಡಲಿಕ್ಕೆ ಮೂರು ತಿಂಗಳ ನೀಲನಕ್ಷೆಯನ್ನು ಅಧಿಕಾರಿಗಳು ಕೊಡಬೇಕೆಂದು ಸೂಚಿಸಿದ್ದೇನೆ. ಟಿಕೆಟ್ ದರ ಹೆಚ್ಚಿಗೆ ಮಾಡದಿರುವುದೇ ಹಾನಿಗೆ ಪ್ರಮುಖ ಕಾರಣವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಸಾರಿಗೆ ಸಂಸ್ಥೆಯಲ್ಲಿ ಭ್ರಷ್ಟಾಚಾರ ವಿಚಾರವಾಗಿ ಮಾತನಾಡಿದ ಅವರು, ನಾಲ್ಕು ನಿಗಮಗಳಲ್ಲಿ ಸೋರಿಕೆ ತಡೆಯಲು ಕ್ರಮ ಕೈಗೊಳ್ಳುತ್ತೇವೆ. ಸಿಎಂ ಬದಲಾವಣೆ ನನ್ನ ಗಮನಕ್ಕೆ ಬಂದಿಲ್ಲ. ನಾನು ಅವರ ಬಗ್ಗೆ ಪ್ರತಿಕ್ರಿಯೆ ನೀಡೊಲ್ಲ. ಈ ವಿಷಯ ಎಲ್ಲಿಂದ ಬಂತು ಎಂಬ ಮಾಹಿತಿಯೂ ಇಲ್ಲ. ಸಿಕ್ಕಿರುವ ಹುದ್ದೆಯಲ್ಲೇ ನನಗೆ ಆತ್ಮತೃಪ್ತಿ ಇದೆ ಎಂದು ಸವದಿ ಸ್ಪಷ್ಟಪಡಿಸಿದರು.