ಧಾರವಾಡ: ತಾಲೂಕಿನ ಹಂಗರಕಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಜಾರಿಯಾದಾಗಿನಿಂದಲೂ ಇದೇ ಮೊದಲ ಬಾರಿಗೆ ಮತದಾನ ನಡೆಯುತ್ತಿದೆ. ಈ ಬಾರಿ ತಮ್ಮ ಅಮೂಲ್ಯ ಮತ ಚಲಾಯಿಸುವ ಮೂಲಕ ತಮಗಿಷ್ಟವಾದ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಈ ಗ್ರಾಮಸ್ಥರು ಪಡೆದಿದ್ದಾರೆ.
ಶಾಸಕ ಅಮೃತ ದೇಸಾಯಿ ತವರೂರಲ್ಲಿ ಇದೇ ಮೊದಲ ಬಾರಿಗೆ ಮತದಾನ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಸ್ವಂತ ಗ್ರಾಮ ಹಂಗರಕಿ. ಇಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಬಂದಾಗಿನಿಂದಲೂ ಮತದಾನ ನಡೆಸದೇ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಂಗರಕಿ ಗ್ರಾಮಸ್ಥರು ಇದೇ ಮೊದಲ ಬಾರಿಗೆ ಮತ ಚಲಾಯಿಸಿ ತಮಗಿಷ್ಟವಾದ ಅಭ್ಯರ್ಥಿ ಆಯ್ಕೆ ಮಾಡುವ ಅವಕಾಶ ಪಡೆದಿದ್ದಾರೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಂಗರಕಿ, ದುಬ್ಬದ ಮರಡಿ ಹಾಗೂ ಖಾನಾಪೂರ ಪಂಚಾಯಿತಿ ಸೇರಿವೆ. ಇದರಲ್ಲಿ 19 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರತಿ ವರ್ಷ ಹಂಗರಕಿ ಹೊರತುಪಡಿಸಿ ಎಲ್ಲಾ ಗ್ರಾಮಗಳಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ ಈ ಬಾರಿ ಹಂಗರಕಿಯಲ್ಲಿಯೂ ಚುನಾವಣೆ ನಡೆಯುತ್ತಿರುವುದು ವಿಶೇಷ.
ಓದಿ: ಮಂಗಳೂರಿನಲ್ಲೂ ಕೇರಳ ಮಾದರಿ ದೋಣಿ ವಿಹಾರ ಆರಂಭ
6 ಜನ ಸದಸ್ಯ ಬಲ ಹೊಂದಿರುವ ಈ ಗ್ರಾಮದಲ್ಲಿ, ನಿವೃತ್ತ ಯೋಧ ಸೇರಿದಂತೆ ಒಟ್ಟು 12 ಜನ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಹಂಗರಕಿ ಮತದಾರರು ಯಾರತ್ತ ಒಲವು ತೋರುತ್ತಾರೆ ಎಂದು ಕಾದು ನೋಡಬೇಕಿದೆ.