ಹುಬ್ಬಳ್ಳಿ : ಕಳೆದ ಜುಲೈ ತಿಂಗಳಲ್ಲಿ ಬರ್ಬರವಾಗಿ ಹತ್ಯೆಯಾದ ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ ಪಟದಾರಿ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿದೆ. ಹತ್ಯೆಯಾದ ದೀಪಕ ಪಟದಾರಿಯ ಕುಟುಂಬ ಸದಸ್ಯರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಮೃತನ ಕುಟುಂಬ ನ್ಯಾಯಕ್ಕಾಗಿ ಪೊಲೀಸ್ ಕಮೀಷನರ್ ಕಚೇರಿಯ ಮೆಟ್ಟಿಲೇರಿದ್ದಾರೆ.
ಘಟನೆಯ ಹಿನ್ನೆಲೆ: ಕಳೆದ ಜುಲೈನಲ್ಲಿ ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ ಪಟದಾರಿಯ ಹತ್ಯೆಯಾಗಿತ್ತು.ಕೆಲ ದುಷ್ಕರ್ಮಿಗಳು ಗ್ರಾಪಂ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದೀಗ ಈ ಹತ್ಯೆಗೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದೆ. ಹತ್ಯೆಯ ಹಿಂದೆ ಪೊಲೀಸರ ಕೈವಾಡ ಇದೆ ಎಂಬ ಗಂಭೀರ ಆರೋಪವನ್ನು ಮೃತ ದೀಪಕ್ ಸಂಬಂಧಿಕರು ಮಾಡಿದ್ದಾರೆ.
ದೀಪಕ್ ಕೊಲೆಯಾಗುವ ಹದಿನೈದು ದಿನಕ್ಕೂ ಮೊದಲು, ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆಯಿಂದ ಇರುವಂತೆ ಮೆಸೇಜ್ ಕಳುಹಿಸಿರುವುದು ಆರೋಪಕ್ಕೆ ಪುಷ್ಟಿ ನೀಡುವಂತಿದೆ. ದೀಪಕ್ ಕೊಲೆ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.