ಹುಬ್ಬಳ್ಳಿ: ಮುಂಗಾರು ಜೂನ್ ತಿಂಗಳ ಕೊನೆಯವರೆಗೂ ಬರಲಿಲ್ಲ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಆಗಸ್ಟ್ನಲ್ಲಿಯೂ ಮಳೆ ಆಗುತ್ತಿಲ್ಲ. ಸರ್ಕಾರ ಮೂರು ತಿಂಗಳಿಂದ ಬರಗಾಲ ಘೋಷಣೆ ಮಾಡಿಲ್ಲ. ಬೆಳೆ, ಕುಡಿಯುವ ನೀರಿನ ಬಗ್ಗೆ ಯೋಚನೆ ಮಾಡಿಲ್ಲ. ಕೂಡಲೇ ಬರಗಾಲ ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ಕೈಯಲ್ಲೂ ಹಣ ಇದೆ. ಆದರೆ ರಾಜ್ಯ ಸರ್ಕಾರ ಬರ ಎಂಬುದಾಗಿ ಘೋಷಣೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಕುಡಿಯುವ ನೀರು, ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು. ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರು ಕಡಿಮೆ ಆಗಿದೆ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಕ್ಷಾಮ ನೋಡಬೇಕಾಗುತ್ತದೆ. ಮುಂದಿನ ವರ್ಷ ಏಪ್ರಿಲ್, ಮೇ ವೇಳೆಗೆ ಕುಡಿಯುವ ನೀರಿಗೂ ಸಮಸ್ಯೆ ತಲೆದೋರಲಿದೆ ಎಂದು ಹೇಳಿದರು.
ಜಲಾಶಯದಲ್ಲಿ ನೀರಿರದ ಕಾರಣ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಹೈಡ್ರೋಎಲೆಕ್ಟ್ರಿಕ್ ಮತ್ತು ನಾಲ್ಕು ಥರ್ಮಲ್ ಪ್ಲಾಂಟ್ಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ. ಹೀಗಾಗಿ ಅನಧಿಕೃತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ರಾತ್ರಿ 12 ರಿಂದ 3 ಗಂಟೆಗೆ ಕರೆಂಟ್ ಕೊಡುತ್ತಿದ್ದಾರೆ. ಬೇರೆ ಕಡೆ ಬೆಳಗ್ಗೆ 3 ರಿಂದ 6ಕ್ಕೆ ಕೊಡುತ್ತಿದ್ದಾರೆ. ಇದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಆದರೆ ಸರ್ಕಾರ ಮಾತ್ರ ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಮಳೆ, ವಿದ್ಯುತ್ ಮತ್ತು ಹಣಕಾಸಿನ ಕ್ಷಾಮ ಉಂಟಾಗಿದೆ ಎಂದು ದೂರಿದರು.