ಹುಬ್ಬಳ್ಳಿ :ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಬಿ ಕೆ ಚಂದ್ರಮೌಳೇಶ್ವರ ಅವರ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕಕರು ಇಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್, ನಿವೃತ್ತ ಶಿಕ್ಷಕರೊಬ್ಬರು ಕರ್ತವ್ಯನಿರತ ತಹಶೀಲ್ದಾರ್ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಘೋರ ಅಪರಾಧ. ಕಾನೂನು ಸುವ್ಯವಸ್ಥೆ ಸಮಸ್ಯೆ ಹಾಗೂ ಕ್ಷೇತ್ರ ಕಾರ್ಯದಲ್ಲಿ ತೊಡಗಿರುವ ಸರ್ಕಾರಿ ನೌಕರರಿಗೆ ರಕ್ಷಣೆ ಅವಶ್ಯಕತೆ ಇದೆ ಎಂಬುದನ್ನು ಈ ಘಟನೆ ತೋರಿಸಿದೆ ಎಂದರು.
ಕಂದಾಯ ಇಲಾಖೆಯ ಸಿಬ್ಬಂದಿ ವೇಳಾಪಟ್ಟಿ ಇಲ್ಲದೆ, ಚುನಾವಣೆ, ನೆರೆ, ಬರ, ಕೊವೀಡ್ನಂತಹ ತುರ್ತುಪರಿಸ್ಥಿತಿ ಕಾರ್ಯ ಸೇರಿದಂತೆ ಬಿಡುವಿಲ್ಲದೆ ನಿತ್ಯದ ಕಚೇರಿ ಕೆಲಸಗಳಲ್ಲಿ ತೊಡಗುತ್ತಾರೆ. ಅಂತಹ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ಅಮಾನವೀಯ. ಪರಿಸ್ಥಿತಿ ಗಾಂಭೀರ್ಯ ಅರಿತು ಇಲಾಖೆ ನೌಕರರು ಕರ್ತವ್ಯ ನಿರ್ವಹಿಸಬೇಕು. ಮೇಲಾಧಿಕಾರಿಗಳ ಗಮನಕ್ಕೆ ತಂದು ಪೊಲೀಸರ ರಕ್ಷಣೆ ಪಡೆಯಬೇಕು ಎಂದು ಹೇಳಿದರು.
ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಸಿ, ಅಪರ ತಹಶೀಲ್ದಾರ್ ವಿಜಯ್ ಕಡಕೊಳ ಸೇರಿ ಸಿಬ್ಬಂದಿ ಇದ್ದರು. ತಹಶೀಲ್ದಾರರ ಕಾರ್ಯಾಲಯದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.