ಹುಬ್ಬಳ್ಳಿ:ದೇಶದಲ್ಲಿ ವಿಧಿಸಿದ ಲಾಕ್ಡೌನ್ನಿಂದ ಹೂವಿನ ಬೆಳೆಗಾರರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.
ಹೂವು ಬೆಳೆ ನಷ್ಟ ಹೊಂದಿರುವ ರೈತರಿಗೆ ತಾತ್ಕಾಲಿಕ ಪರಿಹಾರವಾಗಿ ಹಾಗೂ ಮುಂಬರುವ ದಿನಗಳಲ್ಲಿ ಹೂವು ಬೆಳೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಕ್ರಮವಾಗಿ ಹೆಕ್ಟೇರ್‌ಗೆ ಗರಿಷ್ಠ 25,000 ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ. ಜಿಲ್ಲೆಯ ಹೂವು ಬೆಳೆಗಾರರು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಅಲ್ಪಾವಧಿ ಹೂವು ಬೆಳೆಗಳಾದ ಚೆಂಡು ಹೂವು, ಸೇವಂತಿಗೆ, ಆಸ್ಕರ್ ಮತ್ತಿತರ ಹೂಗಳು ಹಾಗೂ ಬಹು ವಾರ್ಷಿಕ ಬೆಳೆಗಳಾದ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್ ಆಫ್ ಪ್ಯಾರಡೈಸ್, ಗ್ಲಾಡಿಯೋಲಸ್ ಇತ್ಯಾದಿ ಹೂ ಬೆಳೆಗಾರರು ಇದರ ಪ್ರಯೋಜನ ಪಡೆಯಬಹುದು.
ಹೂವಿನ ಬೆಳೆಯು ಕೊಯ್ಲಿಗೆ ಬಂದ ಸಂದರ್ಭದಲ್ಲಿ ಕೋವಿಡ್ -19 ನಿಂದ ದೇಶವ್ಯಾಪ್ತಿ ಲಾಕ್‌ಡೌನ್ ಹೇರಲಾಗಿತ್ತು. ಎಲ್ಲಾ ದೇವಾಲಯಗಳು ಬಂದ್, ಹಬ್ಬ, ಮದುವೆ, ಸಭೆ ಸಮಾರಂಭಗಳು ಮತ್ತು ಮತ್ತಿತರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದರಿಂದ ರೈತರು ಬೆಳೆದ ಹೂವಿಗೆ ಬೇಡಿಕೆ ಇಲ್ಲದಂತಾಗಿತ್ತು. ಮಾರುಕಟ್ಟೆಗೆ ಸಾಗಿಸಲಾಗದೆ ಹಾಗೂ ಕೂಲಿಕಾರರ ಕೊರತೆಯಿಂದ ತೋಟಗಳಲ್ಲಿ ಬೆಳೆಗಳನ್ನು ಕಟಾವು ಮಾಡದೆ ಬೆಳೆ ಹಾನಿಯಾಗಿದೆ.
ಪ್ರಸಕ್ತ ಹಂಗಾಮಿನಲ್ಲಿ ಕಟಾವಿಗೆ ಬಂದ ಹೂವಿನ ಫಸಲು ಹಾನಿಯಾಗಿರುವ ಪ್ರತಿ ರೈತ ಫಲಾನುಭವಿಗೆ ಹೆಕ್ಟೇರ್‌ಗೆ ಗರಿಷ್ಠ 25,000 ರೂ.ಗಳಂತೆ ಗರಿಷ್ಠ ಒಂದು ಹೆಕ್ಟೇರ್‌ವರೆಗೆ ಪರಿಹಾರ ನೀಡಲಾಗುವುದು.