ಹುಬ್ಬಳ್ಳಿ: ಅಗತ್ಯ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ತಲುಪಿಸುವ ಕಾರ್ಯವನ್ನು ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ ಮಾಡುತ್ತಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ - ಲಾಕ್ಡೌನ್ ಎಫೆಕ್ಟ್, ಇಂಧನ ಬೆಲೆ ಏರಿಕೆ ಮತ್ತು ಲಾರಿ ಚಾಲಕರ ಕೊರತೆಯೇ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ.
ಕೋವಿಡ್ ಭೀತಿ, ಇಂಧನ ಬೆಲೆ ಏರಿಕೆ, ಲಾರಿ ಚಾಲಕರ ಕೊರತೆ ಸೇರಿದಂತೆ ವಾಹನದ ಬಿಡಿಭಾಗಗಳ ಮೇಲೆ ಅತಿ ಹೆಚ್ಚಿನ ಜಿಎಸ್ಟಿ ವಿಧಿಸುತ್ತಿರುವುದರಿಂದ ನಿರಂತರ ನಷ್ಟವನ್ನು ಲಾರಿ ಮಾಲೀಕರು ಅನುಭವಿಸುತ್ತಿದ್ದಾರೆ. ಡೀಸೆಲ್ ಬೆಲೆ ಹೆಚ್ಚಾದರೂ ಕೂಡ ಸಾರಿಗೆ ವೆಚ್ಚ ಹೆಚ್ಚಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಸಾರಿಗೆ ವೆಚ್ಚ ಹೆಚ್ಚಿಸಿದ್ರೆ ಗ್ರಾಹಕರು ತಮ್ಮ ಸರಕು ಸಾಗಿಸಲು ಲಾರಿಗಳನ್ನು ಬಳಸಲು ಹಿಂದೇಟು ಹಾಕುತ್ತಾರೆ. ಡೀಸೆಲ್ ಬೆಲೆ ಮತ್ತು ವಾಹನದ ಬಿಡಿಭಾಗಗಳ ಬೆಲೆ ಹೆಚ್ಚಾಗಿರುವುದರಿಂದ ಫೈನಾನ್ಸ್ ಮತ್ತು ಬ್ಯಾಂಕುಗಳಲ್ಲಿ ಸಾಲ ಪಡೆದು ಲಾರಿಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಕಂತುಗಳನ್ನು ಪಾವತಿಸಲು ಆಗುತ್ತಿಲ್ಲ. ದೇಶಕ್ಕೆ ಕೋವಿಡ್ ವಕ್ಕರಿಸಿದಾಗಿನಿಂದಲೂ ಲಾರಿಗಳ ಸಂಚಾರ ಅಷ್ಟಕಷ್ಟೆ ಅನ್ನುವಂತಾಗಿದೆ. ಫೈನಾನ್ಸ್, ಬ್ಯಾಂಕ್‌ನವರು ಸಾಲದ ಕಂತುಗಳನ್ನು ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಲಾರಿ ಮಾಲೀಕರು ಪರದಾಡುವಂತಾಗಿದೆ.