ಹುಬ್ಬಳ್ಳಿ: ಲಾಕ್ಡೌನ್ ಪರಿಣಾಮ ಸ್ಥಗಿತಗೊಂಡಿದ್ದ ಸಾರ್ವಜನಿಕ ಸಾರಿಗೆ ಸಂಚಾರ ಮಂಗಳವಾರದಿಂದ ಪುನಾರಂಭವಾಗಿದೆ. ಮೊದಲ ದಿನ ನೀರಸ ಪ್ರತಿಕ್ರಿಯೆ ತೋರಿದ ನಗರದ ಜನರಿಂದ ಎರಡನೇ ಉತ್ತಮ ಸ್ಪಂದನೆ ಸಿಕ್ಕಿದೆ.
ಮೊದಲ ದಿನ 110 ಬಸ್ಸುಗಳನ್ನು ರಸ್ತೆಗಿಳಿಸಿದ್ದು, 63 ಬಸ್ಸುಗಳು ಸಂಚರಿಸಿದ್ದವು. ಎರಡನೇ ದಿನ(ಬುಧವಾರ) 150 ಬಸ್ಸುಗಳನ್ನು ಘಟಕದಿಂದ ಹೊರತೆಗೆದು ಬಸ್ ನಿಲ್ದಾಣಗಳಿಗೆ ತರಲಾಗಿದ್ದು, 91 ಬಸ್ಸುಗಳು ಸಂಚರಿಸಿದವು. ಮಂಗಳವಾರ ಬೆಂಗಳೂರಿಗೆ ಕೇವಲ ಐದು ವೇಗದೂತ ಸಾರಿಗೆ ಬಸ್ಸುಗಳು ಸಂಚರಿಸಿದ್ದರೆ, ಬುಧವಾರ 6 ರಾಜಹಂಸ ಬಸ್ಸುಗಳು ಹಾಗೂ 12 ವೇಗದೂತ ಬಸ್ಸುಗಳು ಸೇರಿದಂತೆ ಒಟ್ಟು 18 ಬಸ್ಸುಗಳು ಬೆಂಗಳೂರಿಗೆ ತೆರಳಿದ್ದವು.
ಇಂದಿನಿಂದ ರಾಜಹಂಸ ಬಸ್ಸುಗಳಿಗೆ ಮತ್ತು ಹವಾ ನಿಯಂತ್ರಣರಹಿತ ಸ್ಲೀಪರ್ ಕೋಚ್ ಬಸ್ಸುಗಳಿಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಭಾಗದಲ್ಲಿ ಒಟ್ಟು 462 ಬಸ್ಸುಗಳು ಇದ್ದು, ಪ್ರಸ್ತುತ ಶೇಕಡ 25 ರಷ್ಟು ಬಸ್ಸುಗಳು ಮಾತ್ರ ರಸ್ತೆಗಿಳಿಸಲಾಗುತ್ತಿದೆ. ದಿನ ಬಿಟ್ಟು ದಿನ ಬಸ್ಸುಗಳನ್ನು ಕಾರ್ಯಾಚರಣೆ ಮಾಡಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಲು ಕಾರ್ಯಯೋಜನೆ ಮಾಡಲಾಗಿದೆ.
ಇದರಿಂದಾಗಿ ಬಸ್ಸುಗಳ ಸುರಕ್ಷತೆಯ ಮಟ್ಟವನ್ನು ಇನ್ನೂ ಉತ್ತಮ ಪಡಿಸಲು ಸಾಧ್ಯವಾಗುತ್ತಿದೆ. ಜಿಲ್ಲೆಯೊಳಗಿನ ಪ್ರಮುಖ ಸ್ಥಳಗಳು ಸೇರಿದಂತೆ ಇತರೆ ಹೊರ ಜಿಲ್ಲೆಗಳ ವಿವಿಧ ಸ್ಥಳಗಳಾದ ಬಾಗಲಕೋಟೆ, ಗದಗ, ಗಂಗಾವತಿ, ಹಾವೇರಿ, ಇಲಕಲ್, ಬೆಳಗಾವಿ, ವಿಜಯಪುರ, ಹಾನಗಲ್, ಶಿವಮೊಗ್ಗ, ಲಕ್ಷ್ಮೇಶ್ವರ, ಶಿರಹಟ್ಟಿ, ಶಿರಸಿ, ಮೈಸೂರು ಮುಂತಾದ ಊರುಗಳಿಗೂ ಹೆಚ್ಚಿನ ಸಂಖ್ಯೆಯ ಸಾರಿಗೆ ಬಸ್ಸುಗಳು ಸಂಚರಿಸಿದವು.
ಮೊದಲ ದಿನ 1,46,000 ರೂ. ಸಾರಿಗೆ ಆದಾಯ ಸಂಗ್ರಹವಾಗಿದ್ದರೆ, ಎರಡನೇ ದಿನ ಪ್ರಯಾಣಿಕರಿಂದ 4,08,000 ರೂ. ಆದಾಯ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ಸಂಸ್ಥೆ ಇದೆ.